ಸಾಂತ್ವನದಿಂದ ಮಹಿಳೆಯರಿಗೆ ಅನುಕೂಲ:ಹಿಲ್ಡಾ ರಾಯಪ್ಪನ್

ಮಂಗಳೂರು, ಮಾ.7: ಸಾಂತ್ವನದಂತಹ ಕಾರ್ಯಕ್ರಮಗಳಿಂದ ಜಿಲ್ಲೆಯ ನೊಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗಿದ್ದು, ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಪ್ರಕರಣಗಳ ವರದಿ ಹೆಚ್ಚಾಗುತ್ತಿದೆ ಎಂದು ಪ್ರೊ. ಹಿಲ್ದಾ ರಾಯಪ್ಪನ್ ಹೇಳಿದರು.
ದ.ಕ.ಜಿಪಂನಲ್ಲಿ ಉಪಕಾರ್ಯದರ್ಶಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಕರಣಗಳು ರಾಜಿಯಲ್ಲಿ ಇತ್ಯರ್ಥಗೊಂಡರೂ ಕೂಡ ಅವುಗಳ ಮೇಲೆ ಕಣ್ಣಿಡಲಾಗುತ್ತಿದೆ. ಹಾಗಾಗಿ ಮಹಿಳಾ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಹಿಲ್ಡಾ ರಾಯಪ್ಪನ್ ನುಡಿದರು.
ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ ಮಾತನಾಡಿ ಬಂಟ್ವಾಳ ತಾಲೂಕಿನ ಮೇರಮಜಲಿನ ವಿಧವೆಯೊಬ್ಬರ ಸಂಕಷ್ಟದ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಕಾರ್ಯದರ್ಶಿ ಪಂಚಾಯತ್ ವ್ಯಾಪ್ತಿಯ ಬೇರೆ ಜಾಗವನ್ನು ಅವರಿಗೆ ನೀಡಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಾಂತ್ವನದಡಿ ದಾಖಲಾದ ವಿವಿಧ ಪ್ರಕರಣಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು. ಸಭೆಯಲ್ಲಿ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಕಲಾವತಿ, ಸಾಂತ್ವನ ಯೋಜನೆ ಜಿಲ್ಲಾ ಮಟ್ಟದ ಸಮಿತಿಯ ಅಧಿಕಾರಿ ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.







