ಬೆಳಪುವಿನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ: ಕಾಮಗಾರಿಗೆ ಭೂಮಿಪೂಜೆ

ಪಡುಬಿದ್ರಿ: ಬೆಳಪುವಿನಲ್ಲಿ ನಿರ್ಮಾಣವಾಗುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ನಿರ್ಮಾಣದ ಪ್ರಥಮ ಹಂತದ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ 400 ಕೋಟಿ ರೂಪಾಯಿ ವೆಚ್ಚದ ವಿಜ್ಞಾನ ಸಂಶೋಧನಾ ಕೇಂದ್ರ ನಿರ್ಮಾಣ ಕಾಮಗಾರಿಗೆ ವಿಳಂಬವಾಗಿತ್ತು. ಈಗ ಅದೆಲ್ಲ ಪರಿಹಾರವಾಗಿದ್ದು, ಪ್ರಥಮ ಹಂತದ ರೂ. 75 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಳಪುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಕೈಗಾರಿಕಾ ಪ್ರದೇಶಕ್ಕೆ ವಿದ್ಯುದೀಕರಣವಾಗಿದ್ದು, ಕೈಗಾರಿಕೆ ಘಟಕಗಳ ಸ್ಥಾಪನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂದು ಸೊರಕೆ ತಿಳಿಸಿದರು.
ಬೆಳಪು ಗ್ರಾಮದ 26.46 ಎಕ್ರೆ ಜಾಗದಲ್ಲಿ ಪ್ರಥಮ ಹಂತದಲ್ಲಿ 76 ಕೋ. ರೂ. ವೆಚ್ಚದಲ್ಲಿ 13,717 ಚ. ಮೀ. ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಲಿದೆ. ಇದರಲ್ಲಿ ಆಡಳಿತಾತ್ಮಕ ವಿಭಾಗ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, ಅಧಿಕಾರಿಗಳ ವಸತಿಗೃಹ, ಬೋಧಕೇತರರ ವಸತಿಗೃಹ, ವಿಜ್ಞಾನ ಬ್ಲಾಕ್, ಸಂಶೋಧನಾ ಬ್ಲಾಕ್, ಡೈರೆಕ್ಟರ್ಸ್ ಬಂಗ್ಲೆ ಮತ್ತು ಅಟೆಂಡರ್ಸ್ ವಸತಿಗೃಹ ನಿರ್ಮಾಣಗೊಳ್ಳಲಿದೆ ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಸಂಕೊಳ್ಳಿ ವಿವರಿಸಿದರು.
ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಯು.ಸಿ. ಶೇಖಬ್ಬ, ಪಿಡಿಒ ರಮೇಶ್, ಗುತ್ತಿಗೆದಾರ ವಾಸುದೇವ ಶೆಟ್ಟಿ, ಗೃಹ ಮಂಡಳಿಯ ವಿನ್ಯಾಸಗಾರ ಯೋಗೀಶ್‍ಚಂದ್ರ, ಕಿರಿಯ ಇಂಜಿನಿಯರ್ ಹರೀಶ್, ಝಹೀರ್ ಉಪಸ್ಥಿತರಿದ್ದರು.
ತನ್ನ ಶಾಸಕತ್ವದ ಯೋಜನೆಗಳು: ತನ್ನ ಶಾಸಕತ್ವದ ಅವಧಿಯಲ್ಲಿ ಕಾಪು ಕ್ಷೇತ್ರಕ್ಕೆ ಮಂಜೂರಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಂದು ಮಂಜೂರಾದ ಕಸ ವಿಲೇವಾರಿ, ಒಳಚರಂಡಿ, ಕುಡಿಯುವ ನೀರಿನ ಯೋಜನೆಗಳ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳು ಕಾರ್ಯ ಗತವಾಗುವುದಿಲ್ಲವೆಂಬ ಊಹಾಪೋಹಗಳನ್ನೆಬ್ಬಿಸಿ ಗೊಂದಲ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ರೈತರಿಗೆ ಸಮಸ್ಯೆಯಾಗದಂತೆ ಅಣೆಕಟ್ಟು ನಿರ್ಮಿಸಿ ಮಣಿಪುರದಿಂದ ಕಾಪು ಪುರಸಭೆಗೆ ನೀರು ಪೂರೈಸುವ ಯೋಜನೆ ಶೀಘ್ರ ಕಾರ್ಯಗತವಾಗಲಿದೆ. 5 ಕೋಟಿ ರೂ. ವೆಚ್ಚದ ಕುರ್ಕಾಲು ಹಾಗೂ 6 ಕೋಟಿ ವೆಚ್ಚದಲ್ಲಿ ಹೆಜಮಾಡಿಯಲ್ಲಿ ಶಾಂಭವಿ ನದಿಗೆ ಅಣೆಕಟ್ಟು ನಿರ್ಮಿಸಿ ಹತ್ತು ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತದಲ್ಲಿದೆ. ಕಾಪುವಿಗೆ ಮಿನಿ ವಿಧಾನಸೌಧ ಯೋಜನೆ ಮಂಜೂರಾತಿ ಆಗಿದೆ ಎಂದರು.







