ಮಾ. 9-10: ಕರ್ಮಲ ಜಾತ್ರಾ ಮಹೋತ್ಸವ
ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಕರ್ಮಲದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವವು ಮಾ. 9 ಮತ್ತು 10ರಂದು ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಮಹೋತ್ಸವವು ಕುಕ್ಕಾಡಿ ತಂತ್ರಿ ಶ್ರೀ ಪ್ರೀತಂ ಪುತ್ತೂರಾಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕರ್ಮಲ ಜಾತ್ರೆಯು 2ದಿನಗಳ ಕಾಲ ನಡೆಯಲಿದೆ. ಮಾ.9ರಂದು ಬೆಳಗ್ಗೆ 8ರಿಂದ ಗಣಪತಿ ಹವನ, ಕಲಶ ಪೂಜೆ, ಕಲಶಾಭಿಷೇಕ ನಡೆಯಲಿದ್ದು, 10ರಿಂದ ನಾಗದೇವರ ಪ್ರೀತ್ಯರ್ಥವಾಗಿ ಸಾಮೂಹಿಕ ಆಶ್ಲೇಶ ಬಲಿ ಪೂಜೆ ನಡೆಯಲಿದೆ. ಕ್ಷೇತ್ರಕ್ಕೆ ರಂಗಮಂಟಪವನ್ನು ಕೊಡುಗೆಯಾಗಿ ನೀಡಿದ ಪುತ್ತೂರು ನಗರಸಭಾ ಸದಸ್ಯ ವಸಂತ ಕಾರೆಕ್ಕಾಡು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾಪೂಜೆ ನಂತರ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 11ರಿಂದ ಪುತ್ತೂರು ಪುನೀತ್ ಆರ್ಕೆಸ್ಟ್ರಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈಭವ, ಭಕ್ತಿಗಾನ ಮತ್ತು ನೃತ್ಯಗಳ ವೈಭವ ನಡೆಯಲಿದೆ ಎಂದರು.
ಮಾ. 10ರಂದು ಬೆಳಗ್ಗೆ 9.30ರಿಂದ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ 12ರಿಂದ ಮಹಪೂಜೆ, ಶ್ರೀ ದರ್ಶನ ಪಾತ್ರಿ ಅವರಿಂದ ಶ್ರೀ ದೇವಿ ದರ್ಶನ ಮತ್ತು ಅಭಯ ನುಡಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಕುಮೇರಡ್ಕ ಶಿವರಾಮ ಸಪಲ್ಯ ಬಳಗ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ರಿಂದ ಕೀರ್ತಿ ಶೇಷ ಚಿದಾನಂದ ಕಾಮತ್ ಕಾಸರಗೋಡು ಅವರ ಶಿಷ್ಯ ವರ್ಗದಿಂದ ನೃತ್ಯ ಹಾಡುಗಳ ಸಂಗಮ ಕಾರ್ಯಕ್ರಮವು ನಡೆಯಲಿದೆ. ರಾತ್ರಿ 9ರಿಂದ ದೈವಗಳ ಭಂಡಾರ ಆಗಮನದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮೋತ್ಸವವು ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಸಂಚಾಲಕ ಹಾಗೂ ಧರ್ಮದರ್ಶಿ ಕೆ. ರಾಜಣ್ಣ, ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದಿನಕರ ಗೌಡ ಬುಡ್ಲೆಗುತ್ತು, ಕ್ಷೇತ್ರದ ಉತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಸಮಿತಿ ಸದಸ್ಯ ಕೃಷ್ಣಪ್ಪ ಗೌಡ ಉಪಸ್ಥಿತರಿದ್ದರು.







