ಮೊದಲ ಬಾರಿಗೆ 20 ರೂಪಾಯಿ ನಾಣ್ಯ ಬಿಡುಗಡೆ
ಇದರ ವಿಶೇಷತೆಗಳೇನು ಗೊತ್ತಾ?

ಹೊಸದಿಲ್ಲಿ, ಮಾ. 7: ದೇಶದ ಕೃಷಿಯ ಪ್ರಭುತ್ವವನ್ನು ಚಿತ್ರಿಸುವ ಧಾನ್ಯಗಳ ವಿನ್ಯಾಸದೊಂದಿಗೆ 12 ಅಂಚುಗಳ ಬಹುಭುಜಾಕೃತಿಯ 20 ರೂಪಾಯಿಯ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗುವುದು. ಹೊಸ ನಾಣ್ಯ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.
ಹೊರ ವೃತ್ತದಲ್ಲಿ ನಿಕ್ಕಲ್ ಬೆಳ್ಳಿ ಹಾಗೂ ಕೇಂದ್ರದಲ್ಲಿ ನಿಕ್ಕಲ್ ಹಿತ್ತಾಳೆಯಿಂದ ತಯಾರಿಸಲಾಗಿರುವ ಈ 20 ರೂಪಾಯಿಯ ನಾಣ್ಯ 8.54 ಗ್ರಾಂ. ತೂಕ ಹೊಂದಿರಲಿದೆ. ಇನ್ನು ಮುಂದೆ 1 ರೂಪಾಯಿ, 2 ರೂಪಾಯಿ, 5 ರೂಪಾಯಿ ಹಾಗೂ 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಕೂಡ ಟಂಕಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಮಾರ್ಚ್ 6ರ ಗಝೆಟ್ ಅಧಿಸೂಚನೆ ತಿಳಿಸಿದೆ.
20 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹದ ಲಾಂಛನ, ಅದರ ಕೆಳಗೆ ‘ಸತ್ಯಮೇವ ಜಯತೇ’ ಎಂದು ಬರೆಯಲಾಗಿದೆ. ಅಲ್ಲದೆ ಭಾರತ ಎಂಬ ಶಬ್ಧವನ್ನು ಹಿಂದಿಯಲ್ಲಿ ಹಾಗೂ ಇಂಡಿಯಾ ಎಂದು ಬರೆಯಲಾಗಿದೆ. 1 ರೂಪಾಯಿ, 2 ರೂಪಾಯಿ, 5 ರೂಪಾಯಿ ಹಾಗೂ 10 ರೂಪಾಯಿ ಮುಖಬೆಲೆಯ ನಾಣ್ಯಗಳು ಕೂಡ ಇದೇ ವಿನ್ಯಾಸ ಹೊಂದಿರಲಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಮುಖಬೆಲೆಯನ್ನು ‘20’ ಎಂದು ಅಂತಾ ರಾಷ್ಟ್ರೀಯ ಅಂಕೆಯಲ್ಲಿ ರೂಪಾಯಿ ಸಂಕೇತದೊಂದಿಗೆ ಬರೆಯಲಾಗಿದೆ. ಎಡ ಪರಿಧಿಯಲ್ಲಿ ದೇಶದ ಕೃಷಿ ಪ್ರಭುತ್ವ ಬಿಂಬಿಸುವ ಧಾನ್ಯದ ವಿನ್ಯಾಸ ಕಂಡು ಬರುತ್ತದೆ ಎಂದು ಅಧಿಸೂಚನೆ ತಿಳಿಸಿದೆ. ಮೇಲೆ ಬಲ ಹಾಗೂ ಕೆಳಗೆ ಎಡ ಪರಿಧಿಯಲ್ಲಿ ಬೀಸ್ ರೂಪಾಯಿ ಎಂದು ಹಿಂದಿಯಲ್ಲಿ ಹಾಗೂ ಟ್ವೆಂಟಿ ರುಪೀಸ್ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
ನಾಣ್ಯವನ್ನು ಟಂಕಿಸಿದ ವರ್ಷವನ್ನು ಅಂತಾರಾಷ್ಟ್ರೀಯ ಅಂಕೆಯಲ್ಲಿ ನಾಣ್ಯದ ಕೇಂದ್ರದ ಎಡ ಪರಿಧಿಯಲ್ಲಿ ಮುದ್ರಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ. ಈ ನಾಣ್ಯಗಳನ್ನು ಮುಂಬೈ, ಕೋಲ್ಕತ್ತಾದ ಅಲಿಪೋರೆ, ಹೈದರಾಬಾದ್‌ನ ಸೈಫಾಬಾದ್, ಹೈದರಾಬಾದ್‌ನ ಚೇರ್ಲಪಳ್ಳಿ ಹಾಗೂ ಉತ್ತರಪ್ರದೇಶದ ನೋಯ್ಡಿದಲ್ಲಿರುವ ಸರಕಾರಿ ಟಂಕಶಾಲೆಗಳಲ್ಲಿ ಟಂಕಿಸಲಾಗಿದೆ.







