ಭೂಸ್ವಾಧೀನ ಕಾಯ್ದೆ ಹಿಂಪಡೆಯುವಂತೆ ಮಾಜಿ ಶಾಸಕ ಬಿ.ವಿ.ರಾಮಚಂದ್ರ ರೆಡ್ಡಿ ಒತ್ತಾಯ
ಬೆಂಗಳೂರು, ಮಾ. 7: ರಾಜ್ಯ ಸರಕಾರ ತಿದ್ದುಪಡಿಗೊಳಿಸಿರುವ ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಮಾಜಿ ಶಾಸಕ ಬಿ.ವಿ.ರಾಮಚಂದ್ರ ರೆಡ್ಡಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ತಿದ್ದುಪಡಿಗೊಳಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿರುವ ಭೂಸ್ವಾಧೀನ ಕಾಯ್ದೆಯಲ್ಲಿ ರಾಜ್ಯಾಂಗದತ್ತವಾಗಿ ಬಂದ ರೈತರ ಹಕ್ಕುಗಳ ಉಲ್ಲಂಘನೆಯಾಗಿದೆ. ಭೂ ಸ್ವಾಧೀನಕ್ಕೆ ಮುಂಚಿತವಾಗಿ ರೈತರ ಒಪ್ಪಿಗೆ, ಸಾಮಾಜಿಕ ಪರಿಣಾಮಗಳ ಅಧ್ಯಯನಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ರೈತರ ರಕ್ತ ಹೀರುತ್ತಿದ್ದ ಭೂ ಸ್ವಾಧೀನ ಕಾಯ್ದೆ 1994ರ ಬ್ರಿಟಿಷ್ ಕಾಯ್ದೆಯಾಗಿದ್ದು, ರೈತರ ಸಂಕಷ್ಟಗಳ ವಿಮೋಚನೆಗೆ ಯುಪಿಎ ಸರಕಾರ 2013ರಲ್ಲಿ ಭೂಸ್ವಾಧೀನ ಕಾಯ್ದೆ ಜಾರಿಗೊಳಿಸಿತು. ಈ ಕಾಯ್ದೆ ಜಾರಿಗೊಳಿಸಲು ಯುಪಿಎ ಆಡಳಿತದಲ್ಲಿ ಸಂಸತ್ತಿಗೆ 7 ವರ್ಷಗಳು ಬೇಕಾಯಿತು. ಕಲ್ಯಾಣ ಸಿಂಗ್, ಸುಮಿತ್ರಾ ಮಹಾಜನ್ ನೇತೃತ್ವದ ಎರಡು ಜಂಟಿ ಸಮಿತಿಗಳ ಅಧ್ಯಯನದ ನಂತರ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರು ತಿದ್ದುಪಡಿಗಳನ್ನು ಸೇರಿಸಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು ಎಂದರು.
ಭೂಸ್ವಾಧೀನ ಕಾಯ್ದೆಯಿಂದಾಗಿ ಯಾವ ಯೋಜನೆಗೂ ತೊಂದರೆಯಾಗಿಲ್ಲ. ಈ ಕಾಯ್ದೆ ಜಾರಿಗೊಂಡ ನಂತರ ಬೆಂಗಳೂರು ಮೆಟ್ರೋ ಕಾಮಗಾರಿ ಸಕಾಲದಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಕಾಯ್ದೆ ಸರಕಾರಿ ಹಾಗೂ ಸರಕಾರಿ ಸಂಸ್ಥೆಗಳ ಯೋಜನೆಗಳಿಗೆ ಸೀಮಿತವಾಗಿದ್ದು, ಖಾಸಗಿ ಯೋಜನೆಗಳಿಗೆ ಶೇ.80ರಷ್ಟು ರೈತರ ಒಪ್ಪಿಗೆ ಪಡೆಯಬೇಕಾಗಿತ್ತು. ತಿದ್ದುಪಡಿ ವಿಧೇಯಕದಲ್ಲಿ ಅದನ್ನು ತೆಗೆಯಲಾಗಿದೆ. ಕೈಗಾರಿಕಾ, ರಿಯಲ್ ಎಸ್ಟೇಟ್ ಧಣಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೈತ ವಿರೋಧಿ ತಿದ್ದುಪಡಿ ವಿಧೇಯಕವನ್ನು ತಂದಿದೆ ಎಂದು ದೂರಿದರು.







