ಮಲೆ ಮಹದೇಶ್ವರದಲ್ಲಿ ಶಿವರಾತ್ರಿ ಮಹಾರಥೋತ್ಸವ

ಹನೂರು, ಮಾ.7: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ‘ಉಘೇ ಮಾದಪ್ಪ, ಉಘೇ ಉಘೇ ಎಂಬ ಘೋಷವಾಕ್ಯದೊಂದಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಲೂರು ಮಠದ ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ಹಾಗೂ ಬೇಡಗಂಪಣ ಅರ್ಚಕರು ಶಿವರಾತ್ರಿ ಮಹಾರಥೋತ್ಸಕ್ಕೆ ಅದ್ದೂರಿ ಗುರುವಾರ ಬೆಳಗ್ಗೆ ಚಾಲನೆ ನೀಡಿದರು.
ಬಳಿಕ ಬಿಳಿ ಆನೆ ಉತ್ಸವವನ್ನು ನೆರವೇರಿಸಲಾಯಿತು. ಗಭರ್ಗುಡಿಯ ಸುತ್ತ ಭಕ್ತರು ಪ್ರದಕ್ಷಿಣೆ ಹಾಕಿದರು. ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿವಾಹನದ ಉತ್ಸವವನ್ನು ನೆರವೇರಿಸಲಾಯಿತು. ಈ ವೇಳೆ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ಬೆಲ್ಲದ ಆರತಿ ಹಿಡಿದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ರಥೋತ್ಸವದಲ್ಲಿ ನೆರೆದಿದ್ದ ಭಕ್ತರು ತೇರಿಗೆ ಹಣ್ಣು, ಧವನ, ಧನ, ಧಾನ್ಯ ಎಸೆದು ನಮಿಸುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.
ರಥೋತ್ಸವದಲ್ಲಿ ತಮಿಳುನಾಡು ಸೇರಿದಂತೆ ಚಾಮರಾಜನಗರ, ಬೆಂಗಳೂರು, ಮೈಸೂರು, ಮಂಡ್ಯ, ನರಸೀಪುರ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು, ದೊಡ್ಡಬಳ್ಳಾಪುರ ಮಳವಳ್ಳಿ, ಮಂಡ್ಯ, ನಂಜನಗೂಡು, ಟಿ.ನರಸೀಪುರ, ಎಚ್.ಡಿ.ಕೋಟೆ ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಪೊಲೀಸ್ ಬಂದೋಬಸ್ತ್: ಮಹಾರಥೋತ್ಸೋವ ಹಿನ್ನೆಲೆ ಮ.ಬೆಟ್ಟದ ದೇಗುಲದ ಆವರಣದಲ್ಲಿ ಬೆಳಗ್ಗೆ 6ರಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಈ ಹಿನ್ನೆಲೆ ಪೋಲಿಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.










