'ಕಾನೂನುಗಳ ಹೊರತಾಗಿಯೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ'
ಮಹಿಳಾ ದಿನಾಚರಣೆಯಲ್ಲಿ ನ್ಯಾ. ಸಾವಿತ್ರಿ ವೆಂಕಟ್ರಮಣ ಭಟ್ ಕಳವಳ

ಮಂಗಳೂರು, ಮಾ. 8: ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಮಹಿಳೆಯರ ರಕ್ಷಣೆಗಾಗಿಯೇ ಹಲವಾರು ಕಾನೂಗಳಿದ್ದರೂ, ಆಕೆಯ ಮೇಲಿನ ದೌರ್ಜನ್ಯ ಮಾತ್ರ ಇನ್ನೂ ನಿಂತಿಲ್ಲ ಎಂದು ಮಂಗಳೂರು 1ನೆ ಅಪರ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಾವಿತ್ರಿ ವೆಂಕಟರಮಣ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ರಕ್ಷಣೆಗಾಗಿರುವ ಕಾನೂನುಗಳು ಸದ್ಬಳಕೆಯ ಬದಲು ದುರ್ಬಳಕೆಯೇ ಅಧಿಕವಾಗುತ್ತಿದೆ. ಕಾನೂನು ರಕ್ಷಣೆಗಾಗಿರುವುದೇ ಹೊರತು ಇತರರಿಗೆ ತೊಂದರೆ ನೀಡಲು ಉಪಯೋಗಿಸಬಾರದು ಎಂದವರು ಹೇಳಿದರು.
ಮಹಿಳೆಗೆ ಪೂಜನೀಯ ಸ್ಥಾನವನ್ನು ನೀಡಲಾಗುತ್ತದೆಯಾದರೂ ಲೌಕಿಕ ಜೀವನಕ್ಕೆ ಮಾರುಹೋಗಿ ದುರಾಸೆಯಿಂದ ರಾಕ್ಷಸಿ ಪ್ರವೃತ್ತಿಯ ಕಾರಣ ಮಹಿಳೆ ಹೆಜ್ಜೆ ಹೆಜ್ಜೆಗೂ ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಈ ರಾಕ್ಷಸೀ ಮನೋಭಾವದಿಂದ ಮಾನವೀಯತೆಯನ್ನು ಬೆಳೆಸಿಕೊಂಡಾಗ, ಹೆಣ್ಣು ಮಕ್ಕಳು ಕೇವಲ ತಾಯಿ ಅಥವಾ ಮಹಿಳೆಯಾಗಿ ಸೀಮಿತಗೊಳ್ಳದೆ ಮಾತೆಯಾದಾಗ ಮಾತ್ರ ಈ ದಿನಾಚರಣೆಯ ಆಶಯ ಸಾಕಾರಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ವಿಶೇಷ ಆಹ್ವಾತರಾಗಿ ಭಾಗವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ, ಜನಸಂಖ್ಯೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಕುಟುಂಬ ವ್ಯವಸ್ಥೆ ಸಂಕೀರ್ಣಗೊಂಡಿರುವುದು ಮಾನವೀಯತೆಯಿಂದ ದೂರೀಕರಿಸುತ್ತಿದೆ ಎಂದರು. ಬದಲಾವಣೆ ಮನೆಯಿಂದ ಆರಂಭವಾದಾಗ ಸಮಾಜದಲ್ಲಿ ಪರಿಣಾಮ ಬೀರಲು ಸಾಧ್ಯ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಉಪಾಧ್ಯಕೆ್ಷ ಪುಷ್ಪಲತಾ ಯು.ಕೆ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರಾ ನ್ಯಾಯಾಧೀಶೆ ಶಾರದಾ ಬಿ., ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷಾಧಿಕಾರಿ ಎನ್.ವಿ. ಭವಾನಿ, 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿೀಶೆ ಬಿ.ಆರ್. ಪಲ್ಲವಿ ಮಾತನಾಡಿದರು.
ವೇದಿಕೆಯಲ್ಲಿ ವಕೀಲರ ಸಂಘದ ಜತೆ ಕಾರ್ಯದರ್ಶಿ ರೂಪ ಕೆ., ಸದಸ್ಯರಾದ ಪ್ರಫುಲ್ಲ ಪ್ರೇಮ್, ಝೀಟಾ ಪ್ರಿಯಾ ಮೊರಾಸ್, ರೇಖಾ ಕೆ. ಉಪಸ್ಥಿತರಿದ್ದರು.
ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರೂಪಾ ಕೆ. ಸ್ವಾಗತಿಸಿದರು. ಶುಭ ಕಾರ್ಯಕ್ರಮ ನಿರೂಪಿಸಿದರು.








