ಮಹಿಳಾ ಸಬಲೀಕರಣ ಅಂದರೆ ಪುರುಷರೊಂದಿಗೆ ಸ್ಪರ್ಧೆ- ದ್ವೇಷವಲ್ಲ: ಝೊಹರಾ ಅಬ್ಬಾಸ್
ಬ್ಯಾರಿ ಅಕಾಡಮಿಯಿಂದ ಮಹಿಳಾ ದಿನಾಚರಣೆ

ಮಂಗಳೂರು, ಮಾ.8: ಮಹಿಳಾ ಸಬಲೀಕರಣ ಅಂದರೆ ಪುರುಷರೊಂದಿಗೆ ಸ್ಪರ್ಧೆಯಲ್ಲ, ದ್ವೇಷವೂ ಅಲ್ಲ. ಅದು ಬಹು ಆಯಾಮಗಳ ಪ್ರಕ್ರಿಯೆ ಆಗಿದೆಯಲ್ಲದೆ ವ್ಯಕ್ತಿಗತ ಅಥವಾ ಸಾಮಾಜಿಕವಾಗಿ ಸ್ವತಃ ಅರಿವಿನಿಂದ ಮೂಡಿ ಬರುವಂತದ್ದು ಎಂದು ಪಿಯು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಝೊಹರಾ ಅಬ್ಬಾಸ್ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಶುಕ್ರವಾರ ನಡೆದ ‘ಪೆಣ್ಣ್‌ಗುಂ ಉಂಡು ಹಕ್ಕ್’ ಎಂಬ ವಿಷಯದಲ್ಲಿ ಅವರು ವಿಚಾರ ಮಂಡಿಸಿದರು.
ಸ್ತ್ರೀ ಅಂದರೆ ಕರುಣೆ, ವಾತ್ಯಲ್ಯ, ಅಕ್ಕರೆಯ ಆಗರ. ತಾಳ್ಮೆ-ಸಹನೆಯ ಪ್ರತೀಕ. ಆದರೆ, ಸಮಾಜದಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಕಾಣುವ ಪರಿಪಾಠ ಈಗಲೂ ಇದೆ. 21ನೆ ಶತಮಾನದಲ್ಲೂ ಕೂಡ ಮಹಿಳೆ ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ. ಹೆಣ್ಣಿಗೂ ಮನಸ್ಸಿದೆ, ಭಾವನೆಗಳಿವೆ, ಹಕ್ಕುಗಳಿವೆ. ಆದರೆ, ಅದನ್ನು ಪ್ರಕಟಪಡಿಸುವ ಸ್ವಾತಂತ್ರ ನೀಡದೆ ಶೋಷಿಸುತ್ತಿರುವ ಸಮಾಜದ ಬಗ್ಗೆ ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ಧ್ವನಿ ಎತ್ತಬೇಕಿದೆ ಎಂದು ಝೊಹರಾ ಅಬ್ಬಾಸ್ ನುಡಿದರು.
ಮಹಿಳೆಯರು ಕೂಡ ಹಕ್ಕುಗಳಿಗಾಗಿ ಪುರುಷರೊಂದಿಗೆ ಬೇಡದೆ ಸ್ವತಃ ದೈಹಿಕ, ಮಾನಸಿಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿರಿಸಿಕೊಂಡು ಆತ್ಮಗೌರವ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಹಕ್ಕುಗಳನ್ನು ಚಲಾಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಬಾಲ್ಯದಲ್ಲೇ ಹೆಣ್ಮಕ್ಕಳಿಗೆ ಹಕ್ಕು-ಅಧಿಕಾರದ ಬಗ್ಗೆ ಪೋಷಕರು ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಝೊಹರಾ ಅಬ್ಬಾಸ್ ಹೇಳಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ವಹಿಸಿದ್ದರು. ಪತ್ರಕರ್ತೆ ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ, ನ್ಯಾಷನಲ್ ವುಮೆನ್ಸ್ ಫ್ರಂಟ್‌ನ ರಾಜ್ಯ ಸಮಿತಿಯ ಸದಸ್ಯೆ ಫಾತಿಮಾ ನಸೀಮಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ್ತಿ ಮುಮ್ತಾಝ್ ಪಕ್ಕಲಡ್ಕ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಕರಂಬಾರ್ ವರ್ಷದ ಒಂದು ದಿನ ಮಾತ್ರ ಮಹಿಳೆಯರದಲ್ಲ, 365 ದಿನವೂ ಮಹಿಳೆಯರದ್ದೇ ಆಗಿದೆ. ಮಹಿಳೆಯರಿಲ್ಲದೆ ಯಾವುದೇ ಮನೆ, ಸಮಾಜ, ದೇಶ ನಡೆಯಲು ಸಾಧ್ಯವೇ ಇಲ್ಲ ಎಂದರು.
ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಬ್ಯಾರಿ ಸಮುದಾಯದ ಹೆಣ್ಮಕ್ಕಳು ಶಿಕ್ಷಣ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಬ್ಯಾರಿ ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ಬ್ಯಾರಿ ಭಾಷೆಯ ಭವಿಷ್ಯ ಅಥವಾ ಉಳಿವು ಮಹಿಳೆಯರ ಪ್ರಯತ್ನದ ಮೇಲೆ ಅಡಗಿದೆ ಎಂದು ಮುಹಮ್ಮದ್ ಕರಂಬಾರ್ ನುಡಿದರು.
ಸಾಧಕರಿಗೆ ಸನ್ಮಾನ
ಈ ಸಂದರ್ಭ ಸಾಹಿತಿ ಝುಲೈಕಾ ಮುಮ್ತಾಝ್ ಮತ್ತು ಆರೋಗ್ಯ ನಿರೀಕ್ಷಕಿ ಆಯಿಷಾ ಪೆರ್ನೆ ಅವರನ್ನು ಸನ್ಮಾನಿಸಲಾಯಿತು.
ಕವಿಗೋಷ್ಠಿ
ಮಿಸ್ರಿಯಾ ಪಜೀರ್‌ರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಲ್ಮಾ, ಝುಲೈಕಾ ಮುಮ್ತಾಝ್, ಸುಮಯ್ಯಾ ಬಾನು (ಬ್ಯಾರಿ), ಶಿಫಾ ಕೆ.ಎಂ. (ಕನ್ನಡ), ಫೆಲ್ಸಿ ಲೋಬೊ (ಕೊಂಕಣಿ), ಮಂಜುಳಾ (ತುಳು), ಸಾಜಿದಾ ಮೂಮಿನ್ (ಉರ್ದು) ಕವನ ವಾಚಿಸಿದರು. ಅಕಾಡಮಿಯ ಸದಸ್ಯೆ ಮರ್ಯಮ್ ಇಸ್ಮಾಯಿಲ್ ಕವಿಗೋಷ್ಠಿ ನಿರೂಪಿಸಿದರು.
ಬಹುಮಾನ ವಿತರಣೆ
ಬ್ಯಾರಿ ಅಕಾಡಮಿ ಏರ್ಪಡಿಸಿದ್ದ ರಾಜ್ಯಮಟ್ಟದ ಬ್ಯಾರಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮುಫೀದಾ (ಪ್ರಥಮ), ಆಯಿಷತ್ ಸಫ್ವಾನಾ ಯು.(ದ್ವಿತೀಯ), ಮಾಸಿತಾ (ತೃತೀಯ), ನುಸೈಬಾ ಬಾನು, ತಸ್ರಿಯಾ, ನಿಸ್ಮಾ (ಸಮಾಧಾನಕರ) ಹಾಗೂ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಆಯಿಷತ್ ಸಫ್ವಾನಾ ಯು.(ಪ್ರಥಮ), ಆರಿಫಾ ಜಿ.ಎಂ.(ದ್ವಿತೀಯ), ಹಫೀಝಾ ಫಾತಿಮಾ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.
ಅಕಾಡಮಿಯ ಸದಸ್ಯೆ ಆಯಿಶಾ ಯು.ಕೆ. ಸ್ವಾಗತಿಸಿದರು. ಉಪನ್ಯಾಸಕಿ ರುಕ್ಸಾನ ಯು. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










