ಅಡುಗೆ ಅನಿಲ ಸ್ಫೋಟ: ಬಾಲಕ ಮೃತ್ಯು

ಬೆಂಗಳೂರು, ಮಾ.8: ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟಗೊಂಡಿರುವ ಪರಿಣಾಮ ಮನೆಯಲ್ಲಿದ್ದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಶುಕ್ರವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ನೇಪಾಳ ಮೂಲದ ಸಮೀರ್ (13) ಮೃತ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ನೇಪಾಳದ ಮೂಲದ ಕುಟುಂಬವೊಂದು ಎಚ್‌ಎಎಲ್‌ನ ನಿವಾಸವೊಂದರಲ್ಲಿ ವಾಸವಾಗಿದ್ದರು. ಮೃತ ಸಮೀರ್‌ನ ತಾಯಿ ಕಲಾವತಿ ಶುಕ್ರವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಅಡುಗೆ ಅನಿಲ ಸೋರಿಕೆಯಾಗಿದೆ. ಇದರ ಪರಿಣಾಮ ಸ್ಫೋಟಗೊಂಡು ಮನೆಯಲ್ಲಿದ್ದ ಇಬ್ಬರು ಬಾಲಕರ ಪೈಕಿ ಸಮೀರ್ ಮೃತಪಟ್ಟಿದ್ದಾನೆ. ಇನ್ನೋರ್ವ ಬಾಲಕ ಶಂಶೀರ್ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಷಕರ ನಿರ್ಲಕ್ಷ್ಯತನದಿಂದ ಅವಘಡ ಸಂಭವಿಸಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಮಕ್ಕಳು ಹೊರತುಪಡಿಸಿ ಪೋಷಕರು ಇರಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.





