ಗುತ್ತಿಗೆ ನೌಕರರ ವಜಾ ಇಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಮಾ.8: ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ, ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೂ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ. ಅಲ್ಲಿಯವರೆಗೂ ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಲು ಬಿಡುವುದಿಲ್ಲ. ಅಲ್ಲಿಯವರೆಗೆ ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಹೋಗಿ, ಯಾವುದೇ ರೀತಿಯ ಆತಂಕ ನಿಮ್ಮಲ್ಲಿ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಹೊರಗುತ್ತಿಗೆ ನೌಕರರಿಗೆ 2018 ಜುಲೈ ತಿಂಗಳ ವೇತನ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳ ಕುರಿತು ಸಂಘದ ಮುಖಂಡರು, ಮಾಹಿತಿ ನೀಡಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕುಮಾರಸ್ವಾಮಿ ನುಡಿದರು.
ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯವರು ನೀಡಿದ ಭರವಸೆಯಿಂದ ತಾತ್ಕಾಲಿಕವಾಗಿ ಸೇವಾ ಭದ್ರತೆ ಸಿಕ್ಕಿದಂತಾಗಿದೆ. ನೌಕರರು ನಿವೃತ್ತಿ ವಯಸ್ಸು ತಲುಪುವವರೆಗೂ ಅವರಿಗೆ ಸೇವಾ ಭದ್ರತೆ ನೀಡಬೇಕೆಂದು ಸಂಘದ ಆಗ್ರಹವಾಗಿದೆ. ಈ ಬೇಡಿಕೆಯನ್ನು ಈಡೇರಿಸಲು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರು.
ಭವಿಷ್ಯನಿಧಿ ಹಾಗೂ ಇಎಸ್‌ಐ ಸೌಲಭ್ಯಕ್ಕಾಗಿಯೂ ಒತ್ತಾಯ ಮಾಡಬೇಕಿದೆ. ಹೊರಗುತ್ತಿಗೆ ನೌಕರರಿಗೆ ವಾರಕ್ಕೆ ಒಂದು ದಿನ ಕಡ್ಡಾಯವಾಗಿ ರಜೆ ನೀಡಲು ಒತ್ತಾಯಿಸಬೇಕಿದೆ ಎಂದ ಅವರು, ಕೆಲಸದಿಂದ ತೆಗೆದುಹಾಕಿದವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅಂತಹವರಿಗೆ ಈಗ ವೇತನ ಸರಿಯಾಗಿ ದೊರೆಯುತ್ತಿಲ್ಲ ಎಂದು ದೂರು ಕೇಳಿಬಂದಿದೆ. ಕೆಲವೆಡೆ ವೇತನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಮುಖ್ಯಮಂತ್ರಿಯವರ ಮಾತು ಕೇಳಿ ಅಧಿಕಾರಿಗಳು ಎಲ್ಲರಿಗೂ ಮರಳಿ ಕೆಲಸ ನೀಡಿದ್ದಾರೆ. ಮೊದಲು ಆರು ತಿಂಗಳವರೆಗೆ ಉದ್ಯೋಗಕ್ಕೆ ತೊಂದರೆ ಇಲ್ಲ ಎನ್ನಲಾಗಿತ್ತು. ಈಗ ಮುಖ್ಯಮಂತ್ರಿಗಳೇ ತಾವು ಅಧಿಕಾರದಲ್ಲಿರುವವರೆಗೆ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಸುಮಾರು 3,500 ನೌಕರರ ಜೀವನ ಕಷ್ಟವಾಗಿದ್ದು, ಸೇವಾ ಭದ್ರತೆ ನೀಡಲು ಇನ್ನೂ ಸಾಧ್ಯವಾಗಿಲ್ಲ. ಅಧಿಕೃತವಾಗಿ ಸೇವಾ ಭದ್ರತೆ ದೊರೆಯದಿದ್ದರೂ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಕ್ಕಿದೆ ಎಂದು ತಿಳಿಸಿದರು.







