ಟ್ಯಾಕ್ಸಿ ಚಾಲಕರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ, ಮಾ. 8: ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಅಧ್ಯಯನ ಮಾಡಲಾಗಿದ್ದು, ವರದಿಯನ್ವಯ ಚಾಲಕರ ಅನುಕೂಲಕ್ಕೆ ತಕ್ಕಂತೆ ಯೋಜನೆಯೊಂದನ್ನು ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಕೊಠಾರಿ ಭವನದಲ್ಲಿ ರಾಜ್ಯ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಟ್ಯಾಕ್ಸಿ ಚಾಲಕರು ಕಷ್ಟದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಸೌಲಭ್ಯ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕಾಗಿರುವುದು ನಮ್ಮ ಜವಾಬ್ದಾರಿ ಎಂದರು.
ಚಾಲಕರ ಡ್ರೈವಿಂಗ್ ಲೈಸೆನ್ಸ್ ವಿತರಣೆಗೆ ಸಂಬಂಧಿಸಿದ ಕೆಲ ನಿಯಮಾವಳಿಗಳನ್ನು ಸಡಿಲಿಸಲು ಕೋರಿಕೆ ಬಂದಿದೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದ ಅವರು, ಟ್ಯಾಕ್ಸಿ ಚಾಲಕರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವುದರ ಜೊತೆಗೆ 3ಕೋಟಿ ರೂ.ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದರು.
‘ಐರಾವತ’ ಯೋಜನೆಯಡಿಯಲ್ಲಿ ಆಯ್ಕೆಯಾದ ಅರ್ಹ ಚಾಲಕರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 5ಲಕ್ಷ ರೂ.ಸಹಾಯಧನ ಒದಗಿಸಲಾಗುತ್ತದೆ. ಈಗಾಗಲೇ ಈ ಯೋಜನೆಯಡಿಯಲ್ಲಿ 225 ಕೋಟಿ ರೂ.ಅನುದಾನ ಬಳಸಿಕೊಂಡು 4500 ಟ್ಯಾಕ್ಸಿ ತೆಗೆದುಕೊಳ್ಳಲು ಚಾಲಕರಿಗೆ ಅನುಕೂಲ ಮಾಡಲಾಗುತ್ತಿದೆ ಎಂದು ವಿವರಿಸಿದರು.
ತೀರಾ ಇತ್ತೀಚಿಗೆ ಕಲಬುರಗಿ ನಗರದಲ್ಲಿ ಐರಾವತ ಯೋಜನೆಯ ಕಾರ್ಯಕ್ರಮ ಏರ್ಪಡಿಸಿ ಈ ಭಾಗದ ಅರ್ಜಿದಾರರಿಗೆ ಯೋಜನೆ ಕುರಿತಂತೆ ವಿವರಿಸಲಾಯಿತು ಎಂದರು. ಚಾಲಕರು ಸಮಾಜದ ಜನರನ್ನು ಪ್ರತಿಬಿಂಬಿಸುವುದರ ಜೊತಗೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ವಿಮಾನ, ರೈಲು ಹಾಗೂ ಬಸ್ ನಿಲ್ದಾಣ ಸೇರಿದಂತೆ ಎಲ್ಲ ಕಡೆಗೂ ಚಾಲಕರು ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಟ್ಯಾಕ್ಸಿ ಚಾಲಕರು ದೇಶದಲ್ಲಿಯೇ ಗಮನ ಸೆಳೆದಿದ್ದಾರೆಂದು ಪ್ರಿಯಾಂಕ್ ಖರ್ಗೆ ಇದೆ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಹಿರಿಯ ಮುಖಂಡ ಗೋಪಾಲರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.







