3ನೇ ಏಕದಿನ: ಕೊಹ್ಲಿ ಶತಕ ವ್ಯರ್ಥ, ಭಾರತಕ್ಕೆ ಸೋಲು

ರಾಂಚಿ, ಮಾ.8: ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ ಹೊರತಾಗಿಯೂ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೂರನೇ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 32 ರನ್‌ಗಳಿಂದ ಶರಣಾಗಿದೆ. ಆಸೀಸ್ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 314 ರನ್ ಗುರಿ ಪಡೆದ ಭಾರತ 48.2 ಓವರ್‌ಗಳಲ್ಲಿ 281 ರನ್ ಗಳಿಸಿ ಸರ್ವ ಪತನವಾಗಿದೆ.
ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದಾರೆ. ಧವನ್ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಕೇವಲ 1 ರನ್ ಗಳಿಸಿ ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಅಂಬಟಿ ರಾಯುಡು(2) ಮತ್ತೊಮ್ಮೆ ಲಭಿಸಿದ ಅವಕಾಶ ವ್ಯರ್ಥ ಮಾಡಿದರು..
ಆಗ ಜೊತೆಯಾದ ಕೊಹ್ಲಿ ಹಾಗೂ ಧೋನಿ(26) 4ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದರು. ಧೋನಿಯನ್ನು ಕ್ಲೀನ್‌ಬೌಲ್ಡ್ ಮಾಡಿದ ಝಾಂಪ ಈ ಜೋಡಿಯನ್ನು ಬೇರ್ಪಡಿಸಿದರು. 5ನೇ ವಿಕೆಟ್‌ಗೆ 88 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಕೊಹ್ಲಿ ಹಾಗೂ ಕೇದಾರ್ ಜಾಧವ್(26)ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಜಾಧವ್‌ರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದ ಝಾಂಪ ಮತ್ತೊಮ್ಮೆ ಆಸೀಸ್‌ಗೆ ಮೇಲುಗೈ ಒದಗಿಸಿದರು.
85 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 41ನೇ ಶತಕ ಸಿಡಿಸಿದ ಕೊಹ್ಲಿ ತನ್ನ ಹೋರಾಟ ಮುಂದುವರಿಸಿ ವಿಜಯ ಶಂಕರ್‌ರೊಂದಿಗೆ 6ನೇ ವಿಕೆಟ್‌ಗೆ 45 ರನ್ ಸೇರಿಸಿದರು. 38ನೇ ಓವರ್‌ನಲ್ಲಿ ಝಾಂಪ ಎಸೆದ ಸತತ ಎರಡು ಎಸೆತಗಳಲ್ಲಿ ಬೌಂಡರಿ ಸಿಡಿಸಿದ ಕೊಹ್ಲಿ ಅದೇ ಓವರ್‌ನ 3ನೇ ಎಸೆತದಲ್ಲಿ ಕ್ಲೀನ್‌ಬೌಲ್ಡಾದರು. ಆಗ ಭಾರತದ ಗೆಲುವಿನ ಆಸೆ ಕಮರಿಹೋಯಿತು. ಔಟಾಗುವ ಮೊದಲು ಕೊಹ್ಲಿ 95 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್‌ಗಳ ಸಹಿತ 123 ರನ್ ಗಳಿಸಿದರು.
ವಿಜಯ ಶಂಕರ್ 32 ರನ್, ರವೀಂದ್ರ ಜಡೇಜ 24 ರನ್ ಗಳಿಸಿ ಔಟಾದರು.
ಆಸೀಸ್ ಪರ ಸ್ಪಿನ್ನರ್ ಆ್ಯಡಮ್ ಝಾಂಪ(3-70), ಕಮಿನ್ಸ್(3-37) ಹಾಗೂ ರಿಚರ್ಡ್‌ಸನ್ (3-37) ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.







