ಸ್ಪರ್ಧೆಯ ಬಗ್ಗೆ ಸಂಸದೀಯ ಸಮಿತಿ ನಿರ್ಧರಿಸುತ್ತೆ: ಶೋಭಾ ಕರಂದ್ಲಾಜೆ

ಉಡುಪಿ, ಮಾ. 8: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನಾನು ಮತ್ತೆ ಸ್ಪರ್ಧಿಸುವ ಬಗ್ಗೆ ಅಮಿತ್ ಶಾ ನೇತೃತ್ವದ ಬಿಜೆಪಿ ಸಂಸದೀಯ ಸಮಿತಿ ನಿರ್ಧರಿಸುತ್ತದೆ. ಕರ್ನಾಟಕದ ಎಲ್ಲಾ ಹಾಲಿ ಸದಸ್ಯರಿಗೆ ಸ್ಪರ್ಧೆಗೆ ಟಿಕೇಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 4.5ವರ್ಷಗಳ ಕಾಲ ಸಂಸದೆಯಾಗಿ ತನ್ನ ಸಾಧನೆಯ ಪಕ್ಷಿನೋಟ ನೀಡುವ ಪುಸ್ತಕವೊಂದನ್ನು ಬಿಡುಗಡೆಗೊಳಿಸಿದರು. ಹಾಲಿ ಸದಸ್ಯರ ಸಾಧನೆಯ ಕುರಿತು ಅವಲೋಕಿಸಿ ಸಮಿತಿ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.
ತಮ್ಮ ಸ್ಪರ್ಧೆಗೆ ಪಕ್ಷದೊಳಗಿನ ನಾಯಕರೇ ಅಡ್ಡಗಾಲು ಹಾಕುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಹಿಂದೆ ಈ ಸೀಟಿನ ಮೇಲೆ ಕಣ್ಣಿಟ್ಟಿರುವ ಕೆಲವು ಸ್ಪರ್ಧಾಕಾಂಕ್ಷಿಗಳಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಪಕ್ಷದಲ್ಲಿ ಗೆಲ್ಲುವ ಸೀಟಿನ ಮೇಲೆ ತುಂಬಾ ಆಕಾಂಕ್ಷಿಗಳಿರುವುದು ಅತ್ಯಂತ ಸಹಜ. ಆದರೆ ಪಕ್ಷದ ಹಿರಿಯರು, ಹೈಕಮಾಂಡ್ ಎಲ್ಲವನ್ನೂ ಪರಿಶೀಲಿಸಿ ಟಿಕೇಟ್ ನೀಡುತ್ತದೆ ಎಂದು ಶೋಭಾ ನುಡಿದರು.
ರೇವಣ್ಣ ಕ್ಷಮೆ ಕೇಳಲಿ: ನಟ ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಕುರಿತಂತೆ ಸಚಿವ ರೇವಣ್ಣ ನೀಡಿರುವ ಹೇಳಿಕೆ ಅಕ್ಷಮ್ಯ. ಜವಾಬ್ದಾರಿಯುತ ರಾಜಕಾರಣಿಯಾಗಿರುವ ರೇವಣ್ಣ ಇಷ್ಟೊಂದು ಹಗುರವಾಗಿ ಮಾತನಾಡಿ ರುವುದು ಸರಿಯಲ್ಲ ಎಂದರು. ಇದಕ್ಕಾಗಿ ಅವರು ಸುಮಲತಾ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರೇವಣ್ಣ ಅವರು ಹಿರಿಯ ಸಚಿವರು. ಅವರು ಮಹಿಳಾ ದಿನಾಚರಣೆಯ ದಿನದಂದೇ ಇಂಥ ಕೀಳು ಮಟ್ಟದ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಲ್ಲ. ಗಂಡ ಸತ್ತ ಮಹಿಳೆಯೊಬ್ಬರು ರಾಜಕೀಯಕ್ಕೆ ಬರಲು ಇಷ್ಟೆ ದಿನ ಎಂದು ನಿಗದಿಯಾಗಿಲ್ಲ. ಅಂಬರೀಷ್‌ರ ಪತ್ನಿಯಾದ ಸುಮಲತಾ ಮೂರು ದಶಕಗಳಿಂದ ಮಂಡ್ಯದ ಮಗಳು. ಅವರೀಗ ರಾಜಕೀಯ ಬರಲು ಬಯಸಿದರೆ ತಪ್ಪೇನು ಎಂದು ಪ್ರಶ್ನಿಸಿದರು. ಸಮಾಜಸೇವೆಗೆ ಬರುವ ಹೆಣ್ಮಗಳಿಗೆ ಹೀಗೆ ಮಾತನಾಡಿದ್ದ ಸರಿಯಲ್ಲ ಎಂದರು.
ಸುಮಲತಾ ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಬೇರೆ ಪಕ್ಷದಿಂದ ನಿಂತರೆ ಆಕೆಗೆ ಬೆಂಬಲದ ಪ್ರಶ್ನೆಯೇ ಇರುವುದಿಲ್ಲ. ಸ್ವತಂತ್ರರಾಗಿ ನಿಂತರೆ ಬಿಜೆಪಿ ಅವರಿಗೆ ಬೆಂಬಲ ನೀಡುತ್ತದೆ. ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಶೋಭಾ ನುಡಿದರು.
ಅಯೋಧ್ಯೆಯ ಕುರಿತಂತೆ ಸುಪ್ರೀಂ ಕೋರ್ಟಿನ ಆದೇಶದ ಕುರಿತು ಮಾತನಾಡಿದ ಶೋಭಾ, ಬಿಜೆಪಿ ಈ ವಿಚಾರವನ್ನು ಚುನಾವಣೆಗೆ ಬಳಸುವುದಿಲ್ಲ. ಅಯೋಧ್ಯೆ ಭಕ್ತಿಯ ಶೃದ್ಧಾಕೇಂದ್ರ. ಸುಪ್ರೀಂ ಕೋರ್ಟಿನ ತೀರ್ಪಿಗೆ ತಲೆಬಾಗುತ್ತೇವೆ. ಎಂಟು ವಾರಗಳ ಗಡುವಿನಲ್ಲಿ ಏನಾಗುತ್ತೊ ನೋಡೋಣ. ಸೌಹಾರ್ದಯುತವಾಗಿ ಬಗೆಹರಿದರೆ ಸಂತೋಷ ಎಂದರು.
ಹರಿಪ್ರಸಾದ್ ಹೇಳಿಕೆಗೆ ಟೀಕೆ: ಕಾಂಗ್ರೆಸ್‌ಗೆ ದೇಶದಲ್ಲಿ ಸೋಲಿನ ಭೀತಿ ಆವರಿಸಿದೆ. ಹೀಗಾಗಿ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದೆ. ಕಾಂಗ್ರೆಸ್ ಸೈನಿಕರನ್ನು ಅಪಮಾನಿಸುತ್ತಿದೆ. ಅಧಿಕಾರಕ್ಕೆ ಬರೊದಿಲ್ಲ ಎಂದು ಗೊತ್ತಿದ್ದೂ, ನಾಯಕರು ಬಾಯಿಗೆ ಬಂದಂತೆ ಮಾತನಾಡುತಿದ್ದಾರೆ ಎಂದು ಹರಿಪ್ರಸಾದ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಇನ್ನೆರಡು ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಪ್ರಿಲ್ ಮೂರನೇ ವಾರದಲ್ಲಿ ಚುನಾವಣೆ ನಡೆಯಬಹುದು. ಐದು ವರ್ಷಗಳ ಹಿಂದೆ ಮೋದಿ ಪ್ರವಾಸ ಸಂದರ್ಭದಲ್ಲಿ ನಾವು ಮತದಾರರಿಗೆ ನಾಲ್ಕು ಭರವಸೆ ನೀಡಿದ್ದೆವು. ಅವುಗಳೆಲ್ಲವನ್ನೂ ಸರಕಾರ ಈಡೇರಿಸಿದ್ದೆ ಎಂದರು.
ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ಕಾರ್ಯಕ್ಕೆ ವೇಗ, ವಿದೇಶಗಳಲ್ಲಿ ಭಾರತಕ್ಕೆ ಗೌರವ ಹಾಗೂ ಭಾರತದ ಗಡಿಭದ್ರತೆ ಮತ್ತು ಸೈನಿಕರ ರಕ್ಷಣೆ ನಾವು ನೀಡಿದ ಭರವಸೆಗಳಾಗಿವೆ ಎಂದವರು ನುಡಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆಗೊಳಿಸಿದ ಅನುದಾನವನ್ನು ರಾಜ್ಯ ಸಮರ್ಪಕವಾಗಿ ಬಳಸಿಕೊಂಡಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಅನುದಾನ ಉಡುಪಿ- ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್‌ಪೋರ್ಟ್ ಕಚೇರಿ, ಸಖಿ ಸೆಂಟರ್ ಸ್ಥಾಪನೆಯಾಗಿದೆ ಎಂದು ವಿವರಿಸಿದ ಅವರು ಐದು ವರ್ಷಗಳ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ, ಉದಯಕುಮಾರ್ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಗೀತಾಂಜಲಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಸುಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್, ಕಿರಣ್‌ಕುಮಾರ್, ಎ.ಶಿವಕುಮಾರ್ ಉಪಸ್ಥಿತರಿದ್ದರು.







