ಬ್ರಿಟನ್ ನ ವಿಸ್ತರಿತ ಸರಳೀಕೃತ ವೀಸಾ ಪಟ್ಟಿಯಲ್ಲಿ ಭಾರತವಿಲ್ಲ
ಲಂಡನ್, ಮಾ. 8: ಬ್ರಿಟನ್ ಸರಕಾರವು ಗುರುವಾರ ತನ್ನ ವೀಸಾ ಮತ್ತು ವಲಸೆ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಿದೆ. ಇದರ ಪ್ರಕಾರ, ಪ್ರಪಂಚದಾದ್ಯಂತದ ಉದ್ಯಮಿಗಳಿಗಾಗಿ ಎರಡು ಮಾದರಿಯ ನೂತನ ವೀಸಾಗಳನ್ನು ಪರಿಚಯಿಸಲಾಗಿದೆ ಹಾಗೂ ಸರಳೀಕೃತ ವಿದ್ಯಾರ್ಥಿ ವೀಸಾ ಪ್ರಕ್ರಿಯೆ ಅನ್ವಯವಾಗುವ ದೇಶಗಳ ಪಟ್ಟಿಯನ್ನು ವಿಸ್ತರಿಸಲಾಗಿದೆ.
ಆದರೆ, ಸರಳೀಕೃತ ವೀಸಾ ಪ್ರಕ್ರಿಯೆ ಅನ್ವಯವಾಗುವ ಹೆಚ್ಚುವರಿ ದೇಶಗಳ ಪಟ್ಟಿಯಲ್ಲೂ ಭಾರತದ ಹೆಸರಿಲ್ಲ. ಈ ಪಟ್ಟಿಯಲ್ಲಿ ಈಗ ಬ್ರೆಝಿಲ್, ಕಝಖ್ಸ್ತಾನ್, ಮಾರಿಶಸ್, ಒಮಾನ್, ಪೆರು ಮತ್ತು ಟ್ಯುನೀಶಿಯಗಳಿವೆ.
ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವುದು ಮಾತ್ರವಲ್ಲ, ಬ್ರಿಟನ್ನ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಯೂ ಉಳಿಯುತ್ತದೆ ಎಂದು ಬ್ರಿಟನ್ ಗೃಹ ಕಚೇರಿ ಹೇಳಿದೆ.
ವಿಸ್ತರಿತ ಪಟ್ಟಿಯಲ್ಲಿ ಸ್ಥಾನ ಪಡೆಯಲು ‘ಅಗತ್ಯವಾದ ಮಾನದಂಡ’ವನ್ನು ಭಾರತ ಪೂರೈಸುವುದಿಲ್ಲ ಹಾಗೂ ಭಾರತೀಯ ವಿದ್ಯಾರ್ಥಿಗಳು ಈಗ ಪಡೆಯುತ್ತಿರುವ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬ್ರಿಟನ್ ಸರಕಾರ ಹೇಳಿದೆ.