ಪಾಕಿಸ್ತಾನದಲ್ಲಿ 22 ಉಗ್ರ ತರಬೇತಿ ಶಿಬಿರಗಳು ಸಕ್ರಿಯ: ಭಾರತೀಯ ಅಧಿಕಾರಿ

ವಾಶಿಂಗ್ಟನ್, ಮಾ. 8: ಜೈಶೆ ಮುಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದ 9 ಸೇರಿದಂತೆ 22 ಭಯೋತ್ಪಾದಕ ತರಬೇತಿ ಶಿಬಿರಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ, ಆದರೆ ಅವುಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ವಾಶಿಂಗ್ಟನ್‌ನಲ್ಲಿ ಹೇಳಿದ್ದಾರೆ.
ಇನ್ನು ಮುಂದೆಯೂ ಗಡಿಯಾಚೆಯಿಂದ ಭಯೋತ್ಪಾದನೆ ನಡೆದರೆ, ಭಾರತವು ಬಾಲಕೋಟ್ ವಾಯುದಾಳಿಯ ಮಾದರಿಯಲ್ಲೇ ದಾಳಿ ನಡೆಸುವುದು ಎಂದು ಅನಾಮಧೇಯರಾಗಿ ಉಳಿಯಬಯಸಿದ ಅವರು ಎಚ್ಚರಿಸಿದರು.
ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಫೆಬ್ರವರಿ 26ರಂದು ಪಾಕಿಸ್ತಾನದ ಖೈಬರ್ ಪಖ್ತೂಂಖ್ವ ರಾಜ್ಯದ ಬಾಲಕೋಟ್ ಪಟ್ಟಣದಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ತರಬೇತಿ ಶಿಬಿರವೊಂದರ ಮೇಲೆ ದಾಳಿ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.
ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
‘‘ಪಾಕಿಸ್ತಾನವು ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿದೆ ಹಾಗೂ ಅದು ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರ ವಿರುದ್ಧ ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ’’ ಎಂದು ಈ ಅಧಿಕಾರಿ ಹೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
►ಉಗ್ರ ಗುಂಪುಗಳ ವಿರುದ್ಧ ಕ್ರಮ ತೋರಿಕೆಗೆ
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಭಯೋತ್ಪಾದಕ ಗುಂಪುಗಳ ವಿರುದ್ಧ ನಡೆಸುತ್ತಿರುವ ದಮನ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅವರು, ಈ ಕ್ರಮಗಳು ಅಸಾಮಾನ್ಯವೇನೂ ಅಲ್ಲ ಎಂದರು.
‘‘ಭಾರತದಲ್ಲಿ ಪ್ರತಿ ಭಯೋತ್ಪಾದಕ ದಾಳಿ ನಡೆದಾಗಲೂ ಪಾಕಿಸ್ತಾನ ಇಂಥ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭಯೋತ್ಪಾದಕರ ಮುಖಂಡರನ್ನು ವಿಲಾಸಿ ಮನೆಗಳಲ್ಲಿ ಗೃಹಬಂಧನದಲ್ಲಿಡಲಾಗುತ್ತದೆ ಹಾಗೂ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದಾಗ ಅವರನ್ನು ಬಿಡುಗಡೆ ಮಾಡಲಾಗುತ್ತದೆ’’ ಎಂದರು.







