ಹೆಣ್ಣು-ಗಂಡೆಂಬ ಭೇದವಿಲ್ಲದ ಮನಸ್ಥಿತಿ ನಿರ್ಮಾಣವಾಗಲಿ: ಲೇಖಕಿ ಅಂಜಲಿ ರಾಮಣ್ಣ
ಬೆಂಗಳೂರು, ಮಾ.8: ಯಾವುದೆ ತರಹದ ಕೆಲಸದಲ್ಲಿ ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲದೆ ಕೆಲಸ ಮಾಡುವ ಮನಸ್ಥಿತಿಯನ್ನು ಪ್ರತಿಯೊಬ್ಬರು ರೂಪಿಸಿಕೊಂಡಾಗ ಮಾತ್ರ ನಿಜವಾದ ಸಮಾನತೆ ಕಾಣಬಹುದು ಎಂದು ಲೇಖಕಿ ಅಂಜಲಿ ರಾಮಣ್ಣ ತಿಳಿಸಿದರು.
ಶುಕ್ರವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರದ ಜಲಮಂಡಳಿ ರಜತ ಭವನದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆ ತನ್ನ ಸೌಂದರ್ಯದ ಹೊಗಳಿಕೆಗೆ ಬಲಿಯಾಗಬಾರದು. ಹೆಣ್ಣು ಆಲಂಕಾರ ಮಾಡಿಕೊಳ್ಳುವುದು ತನಗೋಸ್ಕರ ಎಂದು ಹೇಳಿಕೊಂಡರು, ಅಂತರಾಳದಲ್ಲಿ ನಾಲ್ಕು ಜನ ನೋಡಲೆಂದು ಭಾವಿಸುತ್ತಾಳೆ. ಸ್ತ್ರೀ ಸೌಂದರ್ಯದ ಜೊತೆಗೆ ಯಾವಾಗಲೂ ವಿನೂತನ ರೀತಿಯಲ್ಲಿ ಗುರುತಿಸಿಕೊಳ್ಳಬೇಕೆಂದು ಅವರು ಹೇಳಿದರು.
ಆಲ್-ಅಮೀನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಪ್ರಾಂಶುಪಾಲ ಡಾ.ಬಿ.ಎ.ಅನುರಾಧಾ ಪ್ರತಾಪ್ ಮಾತನಾಡಿ, ಒಂದು ಗಂಡಸಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಮಹಿಳೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಸಹಜವಾಗಿ ಹೊಂದಿರುತ್ತಾಳೆ. ಈ ಮನಸ್ಥಿತಿಯನ್ನು ತಮ್ಮ ಜೀವನದ ಬೆಳವಣಿಗೆಗೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿಯ ಪಶ್ಚಿಮ ವಿಭಾಗದ ಮಹಿಳಾ ನೌಕರರು ಮುಖಾಭಿನಯ ನಾಟಕದ ಮೂಲಕ ನೀರು ಉಳಿಸುವುದು ಮತ್ತು ನೀರಿನ ಸದ್ಬಳಕೆ ಬಗ್ಗೆ ಗಮನ ಸೆಳೆದರು. ಈ ವೇಳೆ ನಟಿ ಮೇಘನಾರಾಜ್, ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ, ಮುಖ್ಯ ಆಡಳಿತಾಧಿಕಾರಿ ಕೃಷ್ಣಗೌಡ ತಾಯಣ್ಣವರ್, ಮುಖ್ಯ ಲೆಕ್ಕಾಧಿಕಾರಿ ರವಿ ಕಮಲಪುರ್‌ಕರ್, ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಮತ್ತಿತರರಿದ್ದರು.







