ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣದಲ್ಲಿ ವಿಶ್ವದಲ್ಲೇ ಭಾರತ ಪ್ರಥಮ!
ಸಮೀಕ್ಷೆಯಿಂದ ಬಹಿರಂಗ

ಹೊಸದಿಲ್ಲಿ, ಮಾ.8: ಭಾರತದಲ್ಲಿ ಈಗ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸನ್ನಿವೇಶ ಅನಿಶ್ಚಿತವಾಗಿದೆ . ದೇಶದ ಕಡುಬಡವ ಕುಟುಂಬದ ಶೇ.30ರಷ್ಟು ಹುಡುಗಿಯರು ಒಮ್ಮೆಯೂ ತರಗತಿ ಕೊಠಡಿಯೊಳಗೆ ಕಾಲಿಟ್ಟಿಲ್ಲ ಎಂದು ‘ರೈಟ್ ಟು ಎಜುಕೇಶನ್’ (ಆರ್‌ಟಿಇ) ವೇದಿಕೆಯ ರಾಷ್ಟ್ರೀಯ ಸಂಯೋಜಕ ಅಂಬರೀಶ್ ರೈ ತಿಳಿಸಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣವನ್ನು ಜಾಗತಿಕವಾಗಿ ಗಮನಿಸಿದರೆ ಭಾರತ ವಿಶ್ವದಲ್ಲಿ ಪ್ರಪ್ರಥಮ ಸ್ಥಾನ ಪಡೆಯುತ್ತದೆ. ದೇಶದಲ್ಲಿ 60 ಮಿಲಿಯಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ . ಶೇ.25ರಷ್ಟು ಬಾಲಕರು ಹಾಗೂ ಬಾಲಕಿಯರು 2ನೇ ತರಗತಿಯ ಪಠ್ಯ ಓದಲೂ ಅಸಮರ್ಥರಾಗಿದ್ದಾರೆ. ಶೇ.36ರಷ್ಟು ಬಾಲಕಿಯರು ಹಾಗೂ ಶೇ.38ರಷ್ಟು ಬಾಲಕರು ಇಂಗ್ಲಿಷ್ ಪದಗಳನ್ನು ಓದಲು ಅಶಕ್ತರಾಗಿದ್ದಾರೆ. ಅಲ್ಲದೆ ಶೇ.42ರಷ್ಟು ಬಾಲಕಿಯರು ಹಾಗೂ ಶೇ.39ರಷ್ಟು ಬಾಲಕರು ಮೂಲ ವ್ಯವಕಲನ ಅಂಕಗಣಿತವನ್ನು ತಿಳಿಯಲು ಅಸಮರ್ಥರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭ ನೀಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಮಾರ್ಚ್ 8ರಂದು ವಿಶ್ವವು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವ ಸಂದರ್ಭದಲ್ಲಿ ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಕುರಿತ ಈಗಿರುವ ಪರಿಸ್ಥಿತಿ ಅತ್ಯಂತ ಅನಿಶ್ಚಿತವಾಗಿದೆ. 15ರಿಂದ 18 ವರ್ಷದವರೆಗಿನ ಹೆಣ್ಣುಮಕ್ಕಳಲ್ಲಿ ಶೇ.40ರಷ್ಟು ಹದಿಹರೆಯದ ಬಾಲಕಿಯರು ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾಗಿಲ್ಲ. ಕಡುಬಡವ ಕುಟುಂಬದ ಶೇ.30ರಷ್ಟು ಬಾಲಕಿಯರು ಇದುವರೆಗೂ ಯಾವುದೇ ತರಗತಿಯ ಒಳಗೆ ಕಾಲಿರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಶಾಲೆಗೆ ಸೇರ್ಪಡೆಗೊಳ್ಳುವವರೂ , ಶಿಕ್ಷಣ ಮುಗಿಸುವ ಸಂದರ್ಭ ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಕೌಶಲ್ಯ ಹೊಂದಿರುವುದಿಲ್ಲ. 2011-14ರ ಅವಧಿಯಲ್ಲಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳ ಆರಂಭಿಕ ಓದುವ ಮತ್ತು ಗಣಿತ ಜ್ಞಾನ ಕಳಪೆಯಾಗಿದೆ. ಐದನೇ ತರಗತಿ ವಿದ್ಯಾರ್ಥಿಗಳ ಸರಾಸರಿ ಅಂಕ(ಎಲ್ಲಾ ವಿಷಯಗಳಲ್ಲೂ) ಕುಸಿಯುತ್ತಾ ಸಾಗಿದೆ ಎಂಬುದು ಶೈಕ್ಷಣಿಕ ಸ್ಥಿತಿಗತಿ ವಾರ್ಷಿಕ ವರದಿಯಲ್ಲಿ ತಿಳಿದುಬರುತ್ತದೆ. ಆದರೂ ಸರಕಾರವು, ನವೋದಯ ವಿದ್ಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯಗಳಿಗೆ ಒದಗಿಸಿರುವ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸರಕಾರಿ ಶಾಲೆಗಳಿಗೆ ಯಾಕೆ ಒದಗಿಸುತ್ತಿಲ್ಲ . ಸೌಕರ್ಯ ಒದಗಿಸದೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಧ್ಯವೇ ಎಂದವರು ಪ್ರಶ್ನಿಸಿದ್ದಾರೆ.
ತರಬೇತಿ ಪಡೆದ ಶಿಕ್ಷಕರ ಕೊರತೆಯೂ ಈ ಸಮಸ್ಯೆಗೆ ಆಂಶಿಕ ಕಾರಣವಾಗಿದೆ. ಪ್ರಾಥಮಿಕ ಶಾಲೆಯ ಶೇ.17.5ರಷ್ಟು ಹಾಗೂ ಮಾಧ್ಯಮಿಕ ಶಾಲೆಯ ಶೇ.14.8ರಷ್ಟು ಶಿಕ್ಷಕರ ಹುದ್ದೆ ಖಾಲಿಯಿದೆ .ಅಲ್ಲದೆ ಪ್ರಾಥಮಿಕ ಹಂತದಲ್ಲಿ ಕೇವಲ ಶೇ.70ರಷ್ಟು ಶಿಕ್ಷಕರು ಸೂಕ್ತ ಅರ್ಹತೆ ಮತ್ತು ತರಬೇತಿ ಪಡೆದವರಾಗಿದ್ದಾರೆ ಎಂಬುದು ಅಂಕಿಅಂಶಗಳಿಂದ ತಿಳಿದು ಬರುತ್ತದೆ. ಈ ಎಲ್ಲಾ ವಿವರಗಳು ಶಿಕ್ಷಣ ವ್ಯವಸ್ಥೆಯತ್ತ ಸರಕಾರದ ನಿರ್ಲಕ್ಷದ ಧೋರಣೆಗೆ ಕೈಗನ್ನಡಿಯಾಗಿದೆ. ಜಿಡಿಪಿಯ ಶೇ.2.7ರಷ್ಟನ್ನು ಮಾತ್ರ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಬಳಸುತ್ತಿದೆ. 2012-13ಕ್ಕೆ ಹೋಲಿಸಿದರೆ ಇದು ಶೇ.3.1ರಷ್ಟು ಕಡಿಮೆಯಾಗಿದೆ. ಜಿಡಿಪಿಯ ಕನಿಷ್ಟ ಶೇ. 6ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸುವಂತೆ 2015ರ ಇಂಚೆಯೋನ್ ಘೋಷಣೆ ಮತ್ತು ಕೊಠಾರಿ ಆಯೋಗದ ಶಿಫಾರಸ್ಸಿನಲ್ಲಿ ತಿಳಿಸಿದ್ದರೂ ಸರಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂದವರು ಹೇಳಿದ್ದಾರೆ.







