ರಾಜಕೀಯ ಪಕ್ಷಗಳು ಸಾರ್ವಜನಿಕ ಸ್ಥಳಗಳನ್ನು ಕುರೂಪಗೊಳಿಸುವಂತಿಲ್ಲ: ಸರ್ವೋಚ್ಛ ನ್ಯಾಯಾಲಯ

ಚೆನ್ನೈ,ಮಾ.8: ರಾಜಕೀಯ ಪಕ್ಷಗಳು ಜಾಹೀರಾತು ಮತ್ತು ಘೋಷಣೆಗಳ ಭಿತ್ತಿಪತ್ರಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಕುರೂಪಗೊಳಿಸಲು ಅವಕಾಶವಿಲ್ಲ ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ತಮಿಳುನಾಡು ಸರಕಾರಕ್ಕೆ ತಿಳಿಸಿದೆ.
ನೈಸರ್ಗಿಕ ಸಂಪನ್ಮೂಲಗಳಾದ ಬೆಟ್ಟಗಳು, ಪರ್ವತಗಳು, ಬಂಡೆ ಮತ್ತು ಸಾರ್ವಜನಿಕ ಪ್ರದೇಶಗಳನ್ನು ಹೊಲಸುಗೊಳಿಸುವುದನ್ನು ತಡೆಯಲು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬುದನ್ನು ಎರಡು ವಾರಗಳ ಒಳಗಾಗಿ ತಿಳಿಸುವಂತೆ ಸರಕಾರಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಆದೇಶಿಸಿದೆ. ರಾಜಕೀಯ ಪಕ್ಷಗಳು ಬೀದಿಬದಿಗಳಲ್ಲಿ ಡಿಜಿಟಲ್ ಬ್ಯಾನರ್‌ಗಳನ್ನು ಹಾಕುವುದರ ಮೇಲೆ ನಿಷೇಧ ಹೇರಬೇಕೆಂದು ಕೋರಿ ಇನ್ ಡಿಫೆನ್ಸ್ ಆಫ್ ಎನ್‌ವೈರಾನ್ಮೆಂಟ್ ಆ್ಯಂಡ್ ಆ್ಯನಿಮಲ್ಸ್ ಹೆಸರಿನ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಶ್ರೇಷ್ಠ ನ್ಯಾಯಾಲಯ ಜನವರಿ 11ರಂದು ಕೇಂದ್ರ ಮತ್ತು ತಮಿಳುನಾಡು ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಧಾರ್ಮಿಕ ಚಿಹ್ನೆಗಳು ಮತ್ತು ರಾಜಕೀಯ ಪ್ರತಿಕೃತಿಗಳ ಮೂಲಕ ಅತಿಕ್ರಮಣ ಹಾಗೂ ನೈಸರ್ಗಿಕ ಸಂಪನ್ಮೂಲಗಳಾದ ಬೆಟ್ಟ, ಗುಡ್ಡ, ಮರಗಳು ಮತ್ತು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಖಾಸಗಿ ವ್ಯಕ್ತಿಗಳು ಹಾಕುವ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಇಂಥ ಜಾಹೀರಾತುಗಳು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಗಮನ ಸೆಳೆಯುವ ಮೂಲಕ ಸಮಸ್ಯೆಗೆ ಕಾರಣವಾಗುತ್ತವೆ ಎಂದು ತಿಳಿಸಿದ್ದ ನ್ಯಾಯಾಲಯ ಅನಧಿಕೃತ ಬ್ಯಾನರ್‌ಗಳ ಬಗ್ಗೆ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಜಾರಿ ಮಾಡಲು ಕಳೆದ ಐದು ವರ್ಷಗಳಿಂದ ವಿಫಲವಾಗಿರುವುದಕ್ಕೆ ಸರಕಾರ ನೀಡಿರುವ ಕಾರಣದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ.







