ಕ್ವಾರ್ಟರ್‌ಫೈನಲ್‌ನಲ್ಲಿ ಸೆನಾ ಸವಾಲು ಅಂತ್ಯ
ಆಲ್ ಇಂಗ್ಲೆಂಡ್ ಬ್ಯಾಡಿಂಟನ್ ಟೂರ್ನಿ

ನುಚ್ಚುನೂರಾದ ಚಾಂಪಿಯನ್ ಕನಸು
ಬರ್ಮಿಂಗ್‌ಹ್ಯಾಮ್, ಮಾ.8: ಭಾರತದ ಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ತೈವಾನ್ ಆಟಗಾರ್ತಿ ತೈ ಝು ಯಿಂಗ್ ವಿರುದ್ಧ ಸೈನಾ ಶುಕ್ರವಾರ ನಡೆದ ಪಂದ್ಯದಲ್ಲಿ 15-21, 19-21 ನೇರ ಗೇಮ್‌ಗಳ ಅಂತರದಿಂದ ಮಣಿದರು. 2015ರಲ್ಲಿ ಈ ಟೂರ್ನಿಯ ಫೈನಲ್ ತಲುಪಿದ್ದ ಸೈನಾ ಕೇವಲ 37 ನಿಮಿಷಗಳ ಆಟದಲ್ಲಿ ವಿಶ್ವ ನಂ.1 ಆಟಗಾರ್ತಿಯ ಬಿರುಸಿನ ಆಟಕ್ಕೆ ನಿರುತ್ತರರಾದರು.
ಸೈನಾ ಹಾಗೂ ತೈ ಝು 5-15 ಹೆಡ್-ಟು-ಹೆಡ್ ಗೆಲುವು ಸೋಲಿನ ದಾಖಲೆ ಹೊಂದಿದ್ದಾರೆ. ಆದರೆ ತೈವಾನ್ ಆಟಗಾರ್ತಿಯ ವಿರುದ್ಧ ಇದು ಸೈನಾರ ಸತತ 13ನೇ ಸೋಲಾಗಿದೆ. 2015ರಿಂದ ಸೈನಾ ಅವರು ಝು ವಿರುದ್ಧ ಗೆಲುವು ಕಂಡಿಲ್ಲ.
ಆರಂಭದ ಗೇಮ್‌ನಲ್ಲಿ 11-3 ರಿಂದ ಮುನ್ನಡೆ ಸಾಧಿಸಿದ್ದ ಝುಗೆ ತಿರುಗೇಟು ನೀಡಿದ ಸೈನಾ ನಂತರದ 12 ಪಾಯಿಂಟ್‌ಗಳಲ್ಲಿ 9 ಪಾಯಿಂಟ್ ಗಳಿಸಿ 12-14ಕ್ಕೆ ತಲುಪಿದರು. ಆದರೆ ಮತ್ತೆ ಪುಟಿದೆದ್ದ ಝು ಮೊದಲ ಗೇಮ್‌ನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾದರು.
ಎರಡನೇ ಗೇಮ್‌ನ ಆರಂಭದಲ್ಲಿ ಸೈನಾ 8-3ರ ಮುನ್ನಡೆ ಪಡೆದು ಆತ್ಮವಿಶ್ವಾಸದಲ್ಲಿದ್ದರು. ಮಧ್ಯಂತರ ವಿರಾಮದ ವೇಳೆ ಇದು 11-8ಕ್ಕೆ ತಲುಪಿತ್ತು. ಬಳಿಕ 17-15ರಿಂದ ಮುನ್ನಡೆ ಪಡೆದ ಝು ಗೆಲುವಿನೆಡೆಗೆ ಮುಖ ಮಾಡಿದ್ದರು. ಈ ವೇಳೆ ಮತ್ತೆ ಸೈನಾ 19-19ರ ಸಮಬಲ ಸಾಧಿಸಿದರು. ಆದರೆ ತೈ ಝು ಅವರ ಎರಡು ನಿಖರ ಹಿಂಗೈ ಹೊಡೆತಗಳು ಸೈನಾರಿಂದ ಗೆಲುವನ್ನು ಕಸಿದುಕೊಂಡವು. ಇದರೊಂದಿಗೆ ಭಾರತೀಯ ಆಟಗಾರ್ತಿಯ ಚಾಂಪಿಯನ್‌ಪಟ್ಟಕ್ಕೇರುವ ಕನಸು ನುಚ್ಚುನೂರಾಯಿತು.







