ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೂಟಿಕೋರರು ಜೈಲಿಗೆ: ರಾಹುಲ್ ಗಾಂಧಿ
ಹಾವೇರಿಯಲ್ಲಿ ಕೆಪಿಸಿಸಿ ಪರಿವರ್ತನಾ ರ‍್ಯಾಲಿ

ಹಾವೇರಿ, ಮಾ.9: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಲೂಟಿ ಹೊಡೆದು ದೇಶಬಿಟ್ಟು ಹೋಗಿರುವ ನೀರವ್ ಮೋದಿ, ಮಲ್ಯರನ್ನು ಬಂಧಿಸಿ ಜೈಲಿಗೆ ಹಾಕಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
ಕೆಪಿಸಿಸಿ ವತಿಯಿಂದ ಇಲ್ಲಿನ ನೇತಾಜಿ ನಗರದಲ್ಲಿರುವ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಸರಕಾರದ ಆಡಳಿತಾವಧಿಯಲ್ಲಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದು ವಿದೇಶಗಳಿಗೆ ಪರಾರಿಯಾಗಿರುವ ನೀರವ್ ಮೋದಿ, ವಿಜಯ್ ಮಲ್ಯರಂತಹವರನ್ನು ನಾವು ಅಧಿಕಾರಕ್ಕೆ ಬಂದ ತಕ್ಷಣ ಹಿಡಿದು ತಂದು ಜೈಲಿಗೆ ಹಾಕುತ್ತೇವೆ ಎಂದು ಹೇಳಿದರು.
ನಮ್ಮಲ್ಲಿ ಎರಡು ಭಾರತಗಳಿವೆ. ನೀರವ್ ಮೋದಿ, ಅನಿಲ್ ಅಂಬಾನಿ, ಅದಾನಿಯರದ್ದು ಒಂದಾದರೆ, ಬಡವರ, ಕೂಲಿ ಕಾರ್ಮಿಕರ, ರೈತರ ದೇಶ ಮತ್ತೊಂದಾಗಿದೆ. ಮೊದಲ ಭಾರತದಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ವಿಮಾನದಲ್ಲಿ ಹೋಗಿ ವಿದೇಶಗಳಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಅವರ ಮಕ್ಕಳು, ಸಂಬಂಧಿಕರು ವಿದೇಶಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬಡವ ಭಾರತದಲ್ಲಿ ಇಂದಿಗೂ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಪರದಾಡುವಂತಾಗಿದೆ. ನಾವು ಅಧಿಕಾರಕ್ಕೆ ಬಂದರೆ ಒಂದೇ ದೇಶ ಮಾಡುತ್ತೇವೆ. ಇಲ್ಲಿ ಎಲ್ಲರಿಗೂ ನ್ಯಾಯ ಸಿಗುವ ದೇಶ ಮಾಡಲು ಪಣ ತೊಡುತ್ತೇವೆ ಎಂದರು.
ಮಸೂದ್ ಅಸರ್ ನನ್ನು ಪಾಕ್ ಗೆ ಬಿಟ್ಟದ್ದು ಯಾರು..??
ಪುಲ್ವಾಮ ದಾಳಿಯನ್ನು ಪ್ರಸ್ತಾಪಿಸಿದ ರಾಹುಲ್, ಗಡಿಯಲ್ಲಿ ಯೋಧರನ್ನು ಕೊಂದವರು ಯಾರು?, ದಾಳಿಗೆ ಕಾರಣವಾದ ಜೈಷ್-ಎ-ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಬಂಧಿಸಿದ್ದಾಗ ಬಿಡುಗಡೆ ಮಾಡಿದವರು ಯಾರು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಮಾತನಾಡುತ್ತಿಲ್ಲ ಏಕೆ. ವಾಜಪೇಯಿ ಆಡಳಿತವಿದ್ದಾಗ ಇದೇ ಬಿಜೆಪಿ ಸರಕಾರ ಅವರನ್ನು ಬಿಡುಗಡೆ ಮಾಡಿತ್ತು. ಹೀಗಾಗಿ, ಅದರ ಹೊಣೆಗಾರಿಕೆ ಪ್ರಧಾನಿಯೇ ಹೊರಲಿ ಎಂದು ಹೇಳಿದರು.
ಮೋದಿಗೆ ಎಚ್ಎಎಲ್ ಮೇಲೆ ನಂಬಿಕೆಯಿಲ್ಲ: ಉದ್ಯಮಿ ಅನಿಲ್ ಅಂಬಾನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸಂಧಾನಕಾರರ ತಂಡವನ್ನು ಕಡೆಗಣಿಸಿ, ಹೊಸ ರಫೇಲ್ ಒಪ್ಪಂದವನ್ನು ತಾವೇ ಸಿದ್ಧಪಡಿಸಿದ್ದಾರೆ. ಅಂಬಾನಿಗೆ 30,000 ಕೋಟಿ ರೂ. ನೀಡುವ ಸಲುವಾಗಿ ಮೋದಿ ಒಪ್ಪಂದದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ತಂಡವನ್ನು ಕಡೆಗಣಿಸಿ ತಾವೇ ಹೊಸ ಒಪ್ಪಂದವನ್ನು ಸಿದ್ಧಪಡಿಸಿದ್ದಾರೆ. ಭಾರತದ ಎಚ್ಎಎಲ್ ಮೀರಜ್, ಮಿಗ್ ಸೇರಿದಂತೆ ಹಲವು ಯುದ್ಧ ವಿಮಾನಗಳನ್ನು ತಯಾರಿಸಿದೆ. ಆದರೆ, ಮೋದಿಗೆ ಇದರ ಮೇಲೆ ನಂಬಿಕೆಯಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇನೆ, ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ, ಭಯೋತ್ಪಾದನೆ ನಿಯಂತ್ರಣ ಮಾಡುತ್ತೇವೆ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಮೋದಿಯ ಆರ್ಥಿಕ ನೀತಿಯಿಂದಾಗಿ ಸಣ್ಣ ಉದ್ದಿಮೆದಾರರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದರು ಎಂದು ದೂರಿದರು.
ನಿರುದ್ಯೋಗ ಪ್ರಮಾಣ ಅಧಿಕವಾಗಿದೆ: ದೇಶದಲ್ಲಿ ಕಳೆದ 45 ವರ್ಷಗಳಲ್ಲಿ ಅಧಿಕ ನಿರುದ್ಯೋಗ ಪ್ರಮಾಣ ಮೋದಿ ಆಡಳಿತಾವಧಿಯಲ್ಲಿ ದಾಖಲಾಗಿದೆ. ನೋಟು ಅಮಾನ್ಯೀಕರಣದಿಂದ ಲಕ್ಷಾಂತರ ಉದ್ಯೋಗ ನಾಶವಾಯ್ತು. ಜಿಎಸ್ಟಿ ಬಡವರ ಉದ್ಯೋಗ ಕಸಿದಿದೆ ಎಂದ ಅವರು, ದೇಶದ ರಕ್ಷಣೆಯಲ್ಲಿ ಮೋದಿ ನಿರಾಸಕ್ತಿ ತೋರಿದ್ದಾರೆ. ಚೀನಾದ ಸೇನೆ ಭಾರತದ ಗಡಿಯನ್ನು ಆಕ್ರಮಿಸಿಕೊಂಡರೂ ಆ ದೇಶದ ಅಧ್ಯಕ್ಷನ ಜತೆ ಗುಜರಾತ್ ನಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಾ ಕೂತಿದ್ದರು. ಎಲ್ಲಿ ಹೋಗಿದೆ 56 ಇಂಚಿನ ಎದೆಗಾರಿಕೆ ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರ ಒಪ್ಪಿಗೆಯಿಲ್ಲದೆ ಭೂ ಸ್ವಾಧೀನ ಮಾಡಿಕೊಳ್ಳುವಂತಿಲ್ಲ ಎಂಬ ಕಾಯ್ದೆ ಜಾರಿಗೆ ತಂದಿದ್ದೆವು. ಮೋದಿ ಅಧಿಕಾರಕ್ಕೆ ಬಂದ ಮೊದಲ ತಿಂಗಳೇ ಆ ಕಾಯ್ದೆಯನ್ನು ತೆಗೆಯಲು ಯತ್ನಿಸಿದರು. ನಮ್ಮ ವಿರೋಧದಿಂದಾಗಿ ಅದನ್ನು ಕೈಬಿಟ್ಟರು. ಅಲ್ಲದೆ, ಮಹಾತ್ಮಗಾಂಧಿ ನರೇಗಾ ಮಾಡಿದ್ದು ದೊಡ್ಡ ದುರಂತ ಎಂದು ಬಿಂಬಿಸುತ್ತಾ, ಪ್ರಯೋಜನವಿಲ್ಲ ಎಂದು ಹಣವನ್ನೇ ಕಡಿತ ಮಾಡಿದ್ದಾರೆ ಎಂದು ಆಪಾದಿಸಿದರು.
ಪ್ರಧಾನಿ ಕರ್ನಾಟಕದಲ್ಲಿ ಬಂದು ಭಾಷಣ ಮಾಡುತ್ತಾ ಇಲ್ಲಿನ ಸರಕಾರ ರೈತರಿಗೆ ಲಾಲಿಪಾಪ್ ನೀಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಸರಕಾರವಿದ್ದಾಗ ಏನು ಮಾಡಿತ್ತು. ಕೇಂದ್ರ ಸರಕಾರ ರೈತರಿಗೆ ದಿನಕ್ಕೆ ಮೂರೂವರೆ ರೂ. ಕೊಡಲು ಹೊರಟಿದೆ. ಅದನ್ನು ಕೇಳಿ ಸಂಸತ್ತಿನಲ್ಲಿ ಬಿಜೆಪಿ ಸಂಸದರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದ್ದು ದುರಂತ ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯು ಕಾಂಗ್ರೆಸ್-ಬಿಜೆಪಿ ಅಥವಾ ರಾಹುಲ್ ಗಾಂಧಿ ವರ್ಸಸ್ ಮೋದಿ ಅಲ್ಲ, ಪ್ರಜಾಪ್ರಭುತ್ವ ವರ್ಸಸ್ ಸರ್ವಾಧಿಕಾರಿ ಧೋರಣೆಗಳ ನಡುವೆ ನಡೆಯುತ್ತಿದೆ. ಬಿಜೆಪಿ ನಾಯಕರು ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿ ಕಳೆದ ಚುನಾವಣಾ ಪೂರ್ವದಲ್ಲಿ ಎಲ್ಲರಿಗೂ ಅಚ್ಚೇ ದಿನ್ ಆಯೇಗಾ ಅಂದರು. ಆದರೆ, ನಿಜವಾಗಿ ಅಚ್ಚೇ ದಿನ್ ನೀರವ್ ಮೋದಿ, ಅನಿಲ್ ಅಂಬಾನಿ, ವಿಜಯ್ ಮಲ್ಯರಿಗೆ ಬಂದಿದೆ. ಬಡವರಿಗೆ ಏನೂ ಬರಲಿಲ್ಲ. ರೈತರಿಗೆ ದಿನಕ್ಕೆ 17 ರೂ. ಕೊಡುವ ಮೂಲಕ ರೈತರನ್ನು ಮೋಸ ಮಾಡಲು ಹೊರಟಿದ್ದಾರೆ. ಅಂತಹವರನ್ನು ಅಧಿಕಾರದಿಂದ ದೂರವಿಡಿ ಎಂದು ಕರೆ ನೀಡಿದರು.
2019 ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ಬಡವರಿಗೂ ಕನಿಷ್ಠ ಆದಾಯ ನೀಡುವ ಕಾನೂನು ಜಾರಿ ಮಾಡುತ್ತೇವೆ. ಮೋದಿ ಉಳ್ಳವರ ಜೇಬು ತುಂಬಿಸಿದರೆ, ನಾವು ಬಡವರ ಜೇಬು ತುಂಬಿಸುತ್ತೇವೆ. ಅಲ್ಲದೆ, ಜಿಎಸ್ಟಿಯನ್ನು ಬದಲಿಸಿ, ಸರಳೀಕರಣ ಮಾಡುತ್ತೇವೆ.
- ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ







