ಎನ್ನೆಸೆಸ್ಸ್ ಕಾರ್ಯಕ್ರಮಗಳು ಗ್ರಾಮಾಭಿಮುಖವಾಗಿರಲಿ: ಡಾ.ಕೆ.ನಾರಾಯಣ್

ಬೆಂಗಳೂರು, ಮಾ.9: ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸೆಸ್ಸ್) ರೂಪಿಸುವ ನಿರಂತರ ಕಾರ್ಯಕ್ರಮಗಳು ಗ್ರಾಮಾಭಿಮುಖಿವಾಗಿರಬೇಕು ಎಂದು ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಸಂಚಾಲಕ ಡಾ.ಕೆ.ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ಕೆ.ಆರ್.ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ-1ರ ವತಿಯಿಂದ ಬೆಂಗಳೂರು ಪೂರ್ವ ತಾಲೂಕಿನ ನಿಂಬೆಕಾಯಿ ಪುರದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ಮಹಾತ್ಮಗಾಂಧೀಜಿ ಕನಸು ಕಂಡಿದ್ದರು. ಗ್ರಾಮಗಳಲ್ಲಿ ನಿರ್ಮಲ ವಾತಾವರಣ ರೂಪುಗೊಳ್ಳುವ ನಿಟ್ಟಿನಲ್ಲಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದ್ದರು. ಎನ್ನೆಸೆಸ್ಸ್ ಮೂಲಕ ರೂಪಿಸುವ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶಗಳನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸುವಂತಿರಬೇಕು ಎಂದು ಅವರು ಹೇಳಿದರು.
ಬೆಂಗಳೂರು ಪೂರ್ವ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಸಿ.ಕೃಷ್ಣಪ್ಪ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಾಗಿ ಹಣದ ಮೋಹಕ್ಕೆ ಬಿದ್ದು ದುಶ್ಚಟಗಳ ದಾಸರಾಗಿ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಯುವಕರನ್ನು ಗುರಿಯಾಗಿಸಿ ಉತ್ತಮ ಯೋಜನೆಗಳನ್ನು ರೂಪಿಸುವುದರ ಮೂಲಕ ಯುವಕರನ್ನು ಸರಿದಾರಿಗೆ ತರಲು ಎನ್ನೆಸೆಸ್ಸ್ ಒಂದು ಯಶೋ ಮಾರ್ಗ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಕುರಿತಾಗಿ ಶಿಬಿರಾರ್ಥಿಗಳು ಮನೆ ಮನೆಗೆ ತೆರಳಿ ಬಿತ್ತಿ ಪತ್ರಗಳನ್ನು ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ವೇಳೆ ಎನ್ನೆಸೆಸ್ಸ್ ಕಾರ್ಯಕ್ರಮಾಧಿಕಾರಿ ಡಾ.ವಿಜಯಕುಮಾರ್, ಪ್ರೊ.ಡಿ.ರಾಜಣ್ಣ, ಪ್ರೊ.ರಾಜೇಂದ್ರ, ಗ್ರಾಮದ ಮುಖಂಡರಾದ ವೆಂಕಟೇಶ್, ಮಂಜುನಾಥ್, ಸುರೇಶ್, ಮನೋಜ್, ಬಾಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







