ಕ್ಲಬ್‌ಗಳ ಮೇಲೆ ಸಿಸಿಬಿ ದಾಳಿ: 47 ಜನರ ಬಂಧನ
ಲಕ್ಷಾಂತರ ರೂಪಾಯಿ ನಗದು ಜಪ್ತಿ

ಬೆಂಗಳೂರು, ಮಾ.9: ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ ನಗರದ ಎರಡು ಕ್ಲಬ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 47 ಜನರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜ ಪೇಟೆಯ 9ನೇ ಕ್ರಾಸ್‌ನ ಗಣೇಶ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿರುವ ಸ್ಟಾರ್ ಗೋಲ್ಡ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ನ್ಯಾಯಾಲಯದ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕ್ಲಬ್‌ನಲ್ಲಿದ್ದ 11 ಜನರನ್ನು ಬಂಧಿಸಿ, ಜೂಜಾಟಕ್ಕೆ ಸಂಬಂಧಿಸಿದ 88 ಸಾವಿರ ನಗದು ಜಪ್ತಿ ಮಾಡಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.
ಅದೇ ರೀತಿ, ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸರಹದ್ದಿನ ಗೊರಗುಂಟೆಪಾಳ್ಯದ ವೆಂಕಟೇಶ್ವರ ಸ್ಪೋರ್ಟ್ಸ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿಯೂ ಕಾನೂನು ಬಾಹಿರ ಹಣ ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಬಂಧಿತರಿಂದ 1 ಲಕ್ಷ ರೂ. ನಗದು, ಜಪ್ತಿ ಮಾಡಿ, ಇಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ.







