ಮಾ.11 ರಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನ್ಯಾಸಕರ ಒಕ್ಕೂಟದಿಂದ ಧರಣಿ
ಬೆಂಗಳೂರು, ಮಾ.9: ಯುಜಿಸಿ ನಿಯಮಾವಳಿ ಪ್ರಕಾರ ಮಾಸಿಕ 50 ಸಾವಿರ ರೂ. ಸಂಬಳ ನಿಗದಿಪಡಿಸಬೇಕು ಮತ್ತು ಸೇವಾಭದ್ರತೆ ನೀಡಿ ಖಾಯಂ ಉಪನ್ಯಾಸಕರನ್ನು ನೇಮಿಸಲು ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿ ಮಾ.11 ರಂದು ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಡಿ.ಚಲವಾದಿ, ಯುಜಿಸಿ ನಿಯಮದ ಪ್ರಕಾರದ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ 1 ಗಂಟೆಯ ಬೋಧನೆಗೆ ಒಂದು ಸಾವಿರ ರೂ. ನೀಡಲು ಆದೇಶ ನಿಗದಿ ಮಾಡಿತ್ತು. ಆದರೂ ಸರಕಾರ ನಮಗೆ 13 ಸಾವಿರ ಮಾಸಿಕ ವೇತನ ನೀಡುತ್ತಿದೆ. ಅಲ್ಲದೆ, ಆ ಸಂಬಳ 6 ತಿಂಗಳಿಗೊಮ್ಮೆ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಪಡೆದ ನಮಗೆ ಸರಕಾರ ಈ ರೀತಿ ತಾರತಮ್ಯ ಮಾಡುತ್ತಿದೆ. ಖಾಯಂ ಆಗಿ ಕಾರ್ಯ ನಿರ್ವಹಿಸುವ ಉಪನ್ಯಾಸಕರು ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಸರಕಾರ ವರ್ತಿಸುತ್ತಿದೆ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸರಕಾರಗಳೇ ಈ ರೀತಿಯಗಿ ತಾರತಮ್ಯ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಒಂದು ವೇಳೆ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಲ್ಲಿ ಮುಂಬರುವ ಪರೀಕ್ಷೆಗಳಲ್ಲಿ ಮೇಲ್ವಿಚಾರಕ ಮತ್ತು ವೌಲ್ಯಮಾಪನ ಕರ್ತವ್ಯಗಳನ್ನು ಬಹಿಷ್ಕರಿಸಲಾ ಗುವುದು ಮತ್ತು ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.







