ಪಕ್ಷ ಬಯಸಿದರೆ ಮತ್ತೊಮ್ಮೆ ಸ್ಪರ್ಧಿಸುತ್ತೇನೆ: ಸಂಸದ ಜಿ.ಎಂ ಸಿದ್ದೇಶ್ವರ

ದಾವಣಗೆರೆ,ಮಾ.9: ಪಕ್ಷ ಬಯಸಿದರೆ ಮತ್ತೊಮ್ಮೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷ ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡಲಿ, ನೀಡದಿರಲಿ ಇದೇ ನನ್ನ ಕಡೇ ಚುನಾವಣೆ. ಪಕ್ಷದ ವರಿಷ್ಟರು ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ. ನನಗೇ ಟಿಕೆಟ್ ಕೊಡಿ ಎಂಬುದಾಗಿ ಕೇಳುವುದಿಲ್ಲ. ವರಿಷ್ಟರು ನನಗೆ ಟಿಕೆಟ್ ನೀಡಿದರೂ, ನೀಡದಿದ್ದರೂ ಇದೇ ನನ್ನ ಕೊನೆಯ ಚುನಾವಣೆ ಆಗಲಿದೆ. ಕಳೆದ 6 ಚುನಾವಣೆಯಲ್ಲಿ 2 ಸಲ ನನ್ನ ತಂದೆಗೆ ಹಾಗೂ 3 ಸಲ ನನಗೆ ಮತದಾರರು ಆಶೀರ್ವದಿಸಿದ್ದಾರೆ. ಜನರ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಿದ ಸಂತೃಪ್ತಿಯೂ ಇದೆ ಎಂದು ಅವರು ಹೇಳಿದರು.
ಹಿಂದೆ ನನ್ನ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರಿಗೆ 2 ಸಲ ಹಾಗೂ 3 ಅವಧಿಗೆ ನನ್ನನ್ನು ಸತತವಾಗಿ ದಾವಣಗೆರೆ ಮತದಾರರು ಆಶೀರ್ವದಿಸಿ, ಗೆಲ್ಲಿಸಿಕೊಂಡು ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆ, ಸೌಲಭ್ಯ, ಅನುದಾನವನ್ನು ಜಿಲ್ಲೆಯ ಫಲಾನುಭವಿಗಳಿಗೆ, ರೈತರು, ಜನ ಸಾಮಾನ್ಯರಿಗೆ ತಲುಪಿಸಿದ್ದೇನೆ. ಸಾವಿರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳೂ ಕಳೆದೈದು ವರ್ಷದಲ್ಲಿ ಆಗಿವೆ ಎಂದರು.
ದಾವಣಗೆರೆಗೆ ಸ್ಮಾರ್ಟ್ ಸಿಟಿಯಡಿ 1 ಸಾವಿರ ಕೋಟಿ ಪೈಕಿ 396 ಕೋಟಿ ಬಂದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ್ ಸಿಟಿಯಡಿ 179.90 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ 175 ಕೋಟಿ ದಿನದ 24 ಗಂಟೆ ನೀರು ಪೂರೈಸುವ ಜಲಸಿ ಯೋಜನೆಗೆ ಹೊಂದಿಕೆ ಮಾಡಲಾಗಿದೆ. ಉಳಿದ 5 ಕೋಟಿಯಲ್ಲಿ ಜಿಲ್ಲಾ ಕೇಂದ್ರದ 5 ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಹರಿಹರ ತಾ. ಹನಗವಾಡಿ ಬಳಿ ಕೇಂದ್ರದ ಇಂಧನ ಇಲಾಖೆ ಎಂಆರ್‍ಪಿಎಲ್‍ನಿಂದ 960 ಕೋಟಿ ವಚ್ಚದ 2 ಜಿ ಎಥೆನಾಲ್ ಘಟಕವನ್ನು ಸ್ಥಾಪಿಸಲಿದ್ದು, ಇದಕ್ಕಾಗಿ 47 ಎಕರೆ ಭೂಮಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಡವರು, ಮಧ್ಯಮ ವರ್ಗ, ರೈತರು, ಶ್ರಮಿಕರು, ಕೂಲಿ ಕಾರ್ಮಿಕರು ಹೀಗೆ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಧಾನಿ ಮೋದಿ ಜಾರಿಗೊಳಿಸಿದ್ದಾರೆ. ಅವುಗಳನ್ನು ಜಿಲ್ಲೆಯ ಅರ್ಹರಿಗೆ ತಲುಪಿಸಿದ್ದೇನೆಂಬ ಖುಷಿ, ಹೆಮ್ಮೆ ಇದೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶವೆನ್ನದೇ ಕಟ್ಟಕಡೆಯ ಹಳ್ಳಿಗೂ ಕೇಂದ್ರದ ಯೋಜನೆ, ಸೌಲಭ್ಯ ತಲುಪಿಸಿದ್ದೇನೆ. ಪ್ರತಿ ಹಳ್ಳಿಗೂ ಆರೇಳು ಸಲ ಭೇಟಿ ನೀಡಿ, ಜನರ ಅಹವಾಲುಗಳಿಗೂ ಸ್ಪಂದಿಸಿದ್ದೇನೆ. ನಿರಂತರ ಜನರೊಂದಿಗೆ ಒಡನಾಟವಿಟ್ಟುಕೊಂಡು ಬಂದವನು ನಾನು ಎಂದು ಅವರು ವಿವರಿಸಿದರು.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆ 25.40 ಕೋಟಿ ಅನುದಾನದಲ್ಲಿ ಶಾಲಾ ಕೊಠಡಿ, ಸಮುದಾಯ ಭವನ, ಕುಡಿಯುವ ನೀರು, ವ್ಯಾಯಾಮ ಶಾಲೆ, ಗ್ರಂಥಾಲಯ ಸೇರಿದಂತೆ ಸುಮಾರು 609 ಕಾಮಗಾರಿ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಪೂರ್ಣ ಪ್ರಮಾಣದಲ್ಲಿ ತಂದವನು, ಬಳಸಿದವನೂ ನಾನೇ ಎಂದು ಅವರು ಸ್ಪಷ್ಟಪಡಿಸಿದರು.
ಉಜ್ವಲದಡಿ ಜಿಲ್ಲೆಯಲ್ಲಿ 1 ಲಕ್ಷ ಫಲಾನುಭವಿ ಕುಟುಂಬಕ್ಕೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿದೆ. ಹರಿಹರ-ಯಶವಂತಪುರ ಇಂಟರ್ ಸಿಟಿ ರೈಲು ಸಂಚಾರ ಆರಂಭವಾಗಿದೆ. ಚಿಕ್ಕಜಾಜೂರು-ದಾವಣಗೆರೆ-ಹುಬ್ಬಳ್ಳಿ ಡಬ್ಲಿಂಗ್ ಕಾಮಗಾರಿಯನ್ನು 1141 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು, ಚಿಕ್ಕಜಾಜೂರಿನಿಂದ ತೋಳಹುಣಸೆವರೆಗೂ ಈಗಾಗಲೇ ಮಾರ್ಗ ನಿರ್ಮಾಣವಾಗಿದೆ. ದಾವಣಗೆರೆ ರೈಲ್ವೆ ನಿಲ್ದಾಣವನ್ನು ಸುಮಾರು 25 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ, 2ನೇ ಎಂಟ್ರಿ ಮತ್ತು ಪ್ಲಾಟ್ ಫಾರಂ ಅಭಿವೃದ್ಧಿಪಡಿಸಲಾಗುತ್ತಿದೆ. ಡಿಸಿಎಂ ಟೌನ್ ಶಿಪ್ ಬಳಿ ಹಿಂದಿನ ಯುಪಿಎ ಅವದಿಯಲ್ಲಿ ನಿರ್ಮಿಸಿದ್ದ ಅವೈಜ್ಞಾನಿಕ ರೈಲ್ವೆ ಮೇಲ್ಸೇತುವೆ ಸ್ಥಳದಲ್ಲಿ 9.74 ಕೋಟಿ ವೆಚ್ಚದಲ್ಲಿ 61 ಮೀಟರ್ ಅಗಲದ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.
ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ, ಕೊಂಡಜ್ಜಿ ಜಯಪ್ರಕಾಶ, ದಕ್ಷಿಣ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಕೆ.ಹೇಮಂತಕುಮಾರ, ಅಣಬೇರು ಜೀವನಮೂರ್ತಿ, ಶಂಕರಗೌಡ ಬಿರಾದಾರ್, ಧನುಷ ರೆಡ್ಡಿ ಇತರರು ಸುದ್ದಿಗೋಷ್ಟಿಯಲ್ಲಿದ್ದರು.







