28 ಮಕ್ಕಳಿದ್ದರೆ 28 ಕ್ಷೇತ್ರಗಳಿಗೂ ಅವರನ್ನೇ ನಿಲ್ಲಿಸುತ್ತಿದ್ದರು: ದೇವೇಗೌಡ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ, ಮಾ. 9: ನಟಿ ಸುಮಲತಾರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಸಚಿವ ರೇವಣ್ಣ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದು, ಅವರು ಕೂಡಲೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ಪಕ್ಷದ ಚಿಹ್ನೆಯಿಂದ ತೆನೆಹೊತ್ತ ರೈತ ಮಹಿಳೆಯ ಚಿತ್ರ ಕಿತ್ತು ಹಾಕಬೇಕೆಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪತಿ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಸುಮಲತಾ ಅವರನ್ನು ಕಂಡು ರಾಜ್ಯವೇ ಮರುಗುತ್ತಿದೆ. ಹೀಗಿರುವಾಗ ಸಚಿವ ರೇವಣ್ಣನವರ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
28 ಕ್ಷೇತ್ರಕ್ಕೂ ಮಕ್ಕಳನ್ನೇ ನಿಲ್ಲಿಸುತ್ತಿದ್ದರು: ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿರುವ ದೇವೇಗೌಡರು ಇಂದು ಒಕ್ಕಲಿಗರ ನಾಯಕನಾಗಿ ಉಳಿದಿಲ್ಲ. ಅವರಿಗೆ 28 ಮಕ್ಕಳು ಇದ್ದರೆ 28 ಲೋಕಸಭಾ ಕ್ಷೇತ್ರಗಳಿಗೂ ನಿಲ್ಲಿಸುತ್ತಿದ್ದರು. 14 ಮಕ್ಕಳಾದರೂ ಇದ್ದಿದ್ದರೆ 14 ಸೊಸೆಯರನ್ನು ಸೇರಿಸಿ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಕೇವಲ 38 ಸೀಟು ಗೆದ್ದರೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗೋದು ಕೆಲವರ ಹಣೆಯಲ್ಲಿ ಬರೆದಿರುತ್ತದೆ. ಆದರೆ ಇನ್ನು ಮುಂದೆ ಇಂತಹವುಗಳು ನಡೆಯಲು ಸಾಧ್ಯವಿಲ್ಲ ಎಂದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸೋತ ಬಳಿಕ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಅವರಿಗೆ ತಿಲಕ, ಸೀರೆ, ಬಳೆಯಲ್ಲೂ ಬಿಜೆಪಿ ಕಾಣುತ್ತಿದೆ ಎಂದು ಟೀಕಿಸಿದರು.
ನನ್ನ ಬಗ್ಗೆ ಹಗುರವಾಗಿ ಮಾತಾಡುವ ಸಿದ್ದರಾಮಯ್ಯ ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಬಾದಾಮಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧಿಸುವೆ. ಅವರು ಬಾದಾಮಿಯಲ್ಲಿ ಮತ್ತೆ ಗೆಲ್ಲಲಿ, ಶಿವಮೊಗ್ಗದಲ್ಲಿ ನಾನು ಸೋತಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವೆ ಎಂದು ಅವರು ತಿರುಗೇಟು ನೀಡಿದರು.







