ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರ ಬಿಡುಗಡೆ: ಡಿ.ವಿ ಸದಾನಂದಗೌಡ

ಬೆಂಗಳೂರು, ಮಾ.9: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಇನ್ನೊಂದು ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಶನಿವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದರ ಕುರಿತು ಸದ್ಯಕ್ಕೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಒಂದು ವಾರದೊಳಗೆ ನಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು ಎಂದು ಅವರು ಹೇಳಿದರು.
ಕೇಂದ್ರದ ನಾಯಕರು, ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯವಿರುವ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೊತೆಯೂ ಚರ್ಚಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್‌ಗೆ ಬಿಜೆಪಿ ಬೆಂಬಲ ನೀಡುವ ಕುರಿತು ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.
ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಡಿ.ಸಿ.ತಮ್ಮಣ್ಣ ಸೇರಿದಂತೆ ಇನ್ನಿತರ ಅಣ್ಣಂದಿರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರೋಧಿಗಳಾಗಿರುವುದು ನಮಗೆ ಸಂತಸ ತಂದಿದೆ. ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ನೀಡಿರುವ ವಿವಾದಿತ ಹೇಳಿಕೆಯು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.
ದೇಶದಲ್ಲಿ ಹೆಣ್ಣುಮಕ್ಕಳು ಹಾಗೂ ತಾಯಂದಿರಿಗೆ ವಿಶೇಷ ಸ್ಥಾನಮಾನ, ಗೌರವವಿದೆ. ಇಂತಹ ನೆಲದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಅವಹೇಳನಕಾರಿ ಮಾತುಗಳನ್ನಾಡುವುದು ಸರಿಯಲ್ಲ. ಹುಚ್ಚುತನಕ್ಕೂ ಒಂದು ಮಿತಿ ಇರುತ್ತದೆ. ಆದರೆ, ಅವರಲ್ಲಿ ಅದೂ ಇಲ್ಲ ಎಂದು ರೇವಣ್ಣ ವಿರುದ್ಧ ಸದಾನಂದಗೌಡ ವಾಗ್ದಾಳಿ ನಡೆಸಿದರು.
ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣಗಳ ನಡುವೆ ಚತುಷ್ಪಥೀಕರಣಕ್ಕೆ ಶಂಕುಸ್ಥಾಪನೆ ಹಾಗೂ ಆಟೊಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಯ ಲೋಕಾರ್ಪಣೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 6 ಹೆಚ್ಚುವರಿ ಎಸ್ಕಲೇಟರ್‌ಗಳಿಗೆ ಶಂಕುಸ್ಥಾಪನೆ ಹಾಗೂ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಫಾಸ್ಟ್ ಫುಡ್ ಘಟಕವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು.
.jpg)







