ಲಿಂಕನ್ ಹೆಸರಿನ ಆಡು ಮೇಯರ್ ಆಗಿ ಆಯ್ಕೆ!
ವಾಶಿಂಗ್ಟನ್, ಮಾ. 9: ಅಮೆರಿಕದ ವರ್ಮಾಂಟ್ ರಾಜ್ಯದಲ್ಲಿ ಸಣ್ಣ ಪಟ್ಟಣವೊಂದರ ಜನರು ಆಡೊಂದನ್ನು ಮೇಯರ್ ಆಗಿ ಆಯ್ಕೆ ಮಾಡಿದ್ದಾರೆ.
ಈ ಆಡು ರಾಜಕೀಯಕ್ಕೆ ಹೊಸಬನಾಗಿರಬಹುದು, ಆದರೆ, ಅದರ ಹೆಸರು ‘ಲಿಂಕನ್’ ಅಮೆರಿಕದ ಇತಿಹಾಸದಲ್ಲಿ ದೊಡ್ಡ ಹೆಸರು.
2,500 ಜನಸಂಖ್ಯೆ ಹೊಂದಿರುವ ‘ಫೇರ್ ಹ್ಯಾವನ್’ ಪಟ್ಟಣದ ಮೇಯರ್ ಆಗಿ ಆಯ್ಕೆಯಾಗಿರುವ ಉದ್ದ ಕಿವಿಯ ಮೂರು ವರ್ಷ ಪ್ರಾಯದ ಆಡು, ಪ್ರಜಾಪ್ರಭುತ್ವದ ಬಗ್ಗೆ ಜನರಿಗೆ ಒಂದು ಪಾಠ ಕಲಿಸಬಹುದು ಎಂದು ಜನರು ಅಭಿಪ್ರಾಯಪಡುತ್ತಾರೆ.
ಮಂಗಳವಾರ ನಡೆದ ಮತದಾನದಲ್ಲಿ ಲಿಂಕನ್, ಕ್ರಿಸ್ಟಲ್ ಎಂಬ ಹೆಸರಿನ ಇಲಿ ಹಾಗೂ ಹಲವು ನಾಯಿಗಳು ಮತ್ತು ಬೆಕ್ಕುಗಳು ಸೇರಿದಂತೆ 15 ಅಭ್ಯರ್ಥಿಗಳನ್ನು ಸೋಲಿಸಿತು.
ಫೇರ್ ಹ್ಯಾವನ್ಗೆ ಅಧಿಕೃತ ಮೇಯರ್ ಇಲ್ಲ, ಆದರೆ ನಗರ ನಿರ್ವಾಹಕ ಜೋಸೆಫ್ ಗಂಟರ್ ಮೇಯರ್ರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಮಿಶಿಗನ್ ರಾಜ್ಯದ ಒಮೇನ ಎಂಬ ಗ್ರಾಮದಲ್ಲಿ ‘ಸ್ವೀಟ್ ಟಾರ್ಟ್’ ಎಂಬ ಬೆಕ್ಕನ್ನು ಗ್ರಾಮದ ಮುಖ್ಯಸ್ಥನಾಗಿ ಆಯ್ಕೆ ಮಾಡಲಾಗಿದೆ ಎಂಬ ವರದಿಯನ್ನು ಓದಿದ ಬಳಿಕ, ಆಟದ ಮೈದಾನವೊಂದನ್ನು ನಿರ್ಮಿಸುವುದಕ್ಕಾಗಿ ಅಂಥದೇ ಚುನಾವಣೆಯೊಂದನ್ನು ನಡೆಸುವ ನಿರ್ಧಾರಕ್ಕೆ ಜೋಸೆಫ್ ಗಂಟರ್ ಬಂದರು.
ಲಿಂಕನ್ 13 ಮತಗಳನ್ನು ಪಡೆಯುವ ಮೂಲಕ ಸಮೀಪದ ಪ್ರತಿಸ್ಪರ್ಧಿ ‘ಸ್ಯಾಮೀ’ ಹೆಸರಿನ ನಾಯಿಯನ್ನು ಹಿಂದಿಕ್ಕಿತು.
ಆದರೆ, ಜನರು ಮಾತ್ರ ಈ ವಿಷಯದಲ್ಲಿ ಅಷ್ಟೇನೂ ಉತ್ಸಾಹ ತೋರಿಸಿದಂತೆ ಕಾಣಲಿಲ್ಲ. ಕೇವಲ 53 ಮತಗಳು ಚಲಾವಣೆಯಾದವು.