ಸೆಯದ್ ಮುಷ್ತಾಕ್ ಅಲಿ ಟಿ20: ಮುಂದುವರಿದ ಕರ್ನಾಟಕದ ಗೆಲುವಿನ ಓಟ
ಉ.ಪ್ರ. ವಿರುದ್ಧ 10 ರನ್‌ಗಳ ರೋಚಕ ಜಯ

ಇಂದೋರ್, ಮಾ.9: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದ ‘ಬಿ’ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರಪ್ರದೇಶವನ್ನು ಶನಿವಾರ 10 ರನ್‌ಗಳಿಂದ ಮಣಿಸಿದೆ.
ಬೌಲರ್‌ಗಳಾದ ವೇಗಿ ವಿನಯ ಕುಮಾರ್(24ಕ್ಕೆ 2), ಮಧ್ಯಮ ವೇಗಿ ವಿ.ಕೌಶಿಕ್ (22ಕ್ಕೆ 3) ಹಾಗೂ ಆಫ್‌ಸ್ಪಿನ್ನರ್ ಜೆ.ಸುಚಿತ್ (19ಕ್ಕೆ 2) ಕರುನಾಡಿನ ಗೆಲುವಿನ ರೂವಾರಿಗಳಾದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವನ್ನು ಉತ್ತರ ಪ್ರದೇಶದ ಬೌಲರ್‌ಗಳು 6 ವಿಕೆಟ್‌ಗೆ 149 ರನ್‌ಗಳಿಗೆ ನಿಯಂತ್ರಿಸಿದರು. ಆರಂಭಿಕ ದಾಂಡಿಗ ರೋಹನ್ ಕದಮ್ (35, 30 ಎಸೆತ) ಕರ್ನಾಟಕದ ಗರಿಷ್ಠ ಸ್ಕೋರರ್ ಎನಿಸಿದರೆ ರಾಷ್ಟ್ರೀಯ ತಂಡದ ಆಟಗಾರ ಮಾಯಾಂಕ್ ಅಗರ್ವಾಲ್ (33, 27 ಎಸೆತ) ಪ್ರಭಾವಿ ಎನಿಸಿದರು. ಇವರಿಬ್ಬರೂ ಎರಡನೇ ವಿಕೆಟ್ ಜೊತೆಯಾಟದಲ್ಲಿ 60 ರನ್‌ಗಳನ್ನು ಜಮೆ ಮಾಡಿದರು. ಕರುಣ್ ನಾಯರ್ (21), ಮನೀಷ್ ಪಾಂಡೆ (22) ಹಾಗೂ ಮನೋಜ್ ಭಾಂಡಗೆ (25) ಕರ್ನಾಟಕಕ್ಕೆ ಬ್ಯಾಟಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಿದರು.
ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಉತ್ತರಪ್ರದೇಶಕ್ಕೆ ನಾಯಕ ಆಕಾಶ್‌ದೀಪ್ ನಾಥ್ (46, 41 ಎಸೆತ) ಉತ್ತಮ ಆರಂಭ ನೀಡಿದರು. 14ನೇ ಓವರ್‌ನಲ್ಲಿ ಆಕಾಶ್ ಔಟಾದ ಬಳಿಕ ಕರ್ನಾಟಕ ತನ್ನ ಹಿಡಿತವನ್ನು ಬಿಗಿಗೊಳಿಸಿತು.
ಕೊನೆಯ 2 ಓವರ್‌ಗಳಲ್ಲಿ ಉತ್ತರಪ್ರದೇಶಕ್ಕೆ 22 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲಿಂಗ್ ಮಾಡಿದ ವಿನಯ್ 8 ರನ್ ನೀಡಿ ಎರಡು ವಿಕೆಟ್ ಪಡೆದರು. ಆ ಬಳಿಕ ಕೊನೆಯ ಓವರ್‌ನಲ್ಲಿ 14 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದ ಎದುರಾಳಿ ತಂಡಕ್ಕೆ ಕೌಶಿಕ್ 3 ರನ್ ನೀಡಿ ಎರಡು ವಿಕೆಟ್ ಪಡೆದು ಆಘಾತ ನೀಡಿದರು. 139 ರನ್‌ಗಳಿಗೆ ಉತ್ತರಪ್ರದೇಶ ಸೀಮಿತಗೊಂಡಿತು.
ಈ ಗೆಲುವಿನೊಂದಿಗೆ ಕರ್ನಾಟಕ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.







