ಐ-ಲೀಗ್ ಫುಟ್ಬಾಲ್ ಟೂರ್ನಿ ಚೆನ್ನೈ ಸಿಟಿ ಚಾಂಪಿಯನ್

ಹೊಸದಿಲ್ಲಿ, ಮಾ.9: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಚೆನ್ನೈ ಸಿಟಿ ಫುಟ್ಬಾಲ್ ತಂಡ ಮಿನರ್ವ ಪಂಜಾಬ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ಐ-ಲೀಗ್ ಫುಟ್ಬಾಲ್ ಕಪ್‌ನ್ನು ಎತ್ತಿ ಹಿಡಿದಿದೆ.
ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಲೀಗ್‌ನ ಕೊನೆಯ ದಿನವಾದ ಶನಿವಾರ ರೊನಾಲ್ಡೊ ಬಿಲಾಲಾ 3ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂಜಾಬ್‌ಗೆ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟರು. ಆದರೆ, 56ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ ಪೆಡ್ರೊ ಮಾಂಝಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. 69 ಹಾಗೂ 90+3ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ ಗೌರವ್ ಬೋರಾ, ಚೆನ್ನೈ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಲೀಗ್‌ನಲ್ಲಿ ಮೂರನೇ ಬಾರಿ ಭಾಗವಹಿಸಿರುವ ಅಕ್ಬರ್ ನವಾಸ್ ಕೋಚಿಂಗ್‌ನಲ್ಲಿ ಪಳಗಿರುವ ಚೆನ್ನೈ ತಂಡ ಪ್ರಶಸ್ತಿ ಜಯಿಸಿ ಗಮನ ಸೆಳೆಯಿತು.
ಸತತ ಮೂರನೇ ವರ್ಷ ಲೀಗ್‌ನ ಕೊನೆಯ ದಿನ ಎರಡು ತಂಡಗಳು ಪ್ರಶಸ್ತಿ ಸ್ಪರ್ಧೆಯಲ್ಲಿದ್ದವು. ಈ ಬಾರಿ ಚೆನ್ನೈ ಹಾಗೂ ಈಸ್ಟ್ ಬೆಂಗಾಲ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತು. ಅಂತಿಮವಾಗಿ ಚೆನ್ನೈ ಒಟ್ಟು 43 ಅಂಕ ಗಳಿಸಿ ಪ್ರಶಸ್ತಿ ಜಯಿಸಿದರೆ, ಬೆಂಗಾಳ್ ಶನಿವಾರ ಗೋಕುಲಂ ಕೇರಳ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದರೂ 42 ಅಂಕ ಗಳಿಸಿ ಎರಡನೇ ಸ್ಥಾನ ಪಡೆಯಿತು. 15 ವರ್ಷಗಳ ಕನಸು ಈಡೇರಿಸಿಕೊಳ್ಳಲು ವಿಫಲರಾಯಿತು.





