ಭಾರತ ವಿರುದ್ಧ ಕ್ರಮಕ್ಕೆ ಐಸಿಸಿಗೆ ಪಾಕಿಸ್ತಾನ ಒತ್ತಾಯ
ಕರಾಚಿ, ಮಾ.9: ಆಸ್ಟ್ರೇಲಿಯ ವಿರುದ್ಧ ರಾಂಚಿಯಲ್ಲಿ ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರು ಮಿಲಿಟರಿ ಕ್ಯಾಪ್‌ಗಳನ್ನು ಧರಿಸಿದ್ದನ್ನು ಐಸಿಸಿ ತನ್ನ ಗಮನಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿರುವ ಪಾಕಿಸ್ತಾನ, ವಿರಾಟ್ ಕೊಹ್ಲಿ ಪಡೆ ಪಂದ್ಯವನ್ನು ರಾಜಕೀಕರಣಗೊಳಿಸುತ್ತಿದೆ ಎಂದು ಹೇಳಿದೆ.
ಪುಲ್ವಾಮ ಉಗ್ರಗಾಮಿ ದಾಳಿಯಲ್ಲಿ ಹುತಾತ್ಮರಾಗಿರುವ ಸಿಆರ್‌ಪಿಎಫ್ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ಕ್ರಿಕೆಟಿಗರು ಆರ್ಮಿ ಕ್ಯಾಪ್ ಧರಿಸಿ ಆಡಿದ್ದರು. 3ನೇ ಪಂದ್ಯದಲ್ಲಿನ ಸಂಭಾವನೆಯನ್ನು ಹುತಾತ್ಮ ಯೋಧರ ಕುಟುಂಬ ಕಲ್ಯಾಣ ನಿಧಿಗೆ ದಾನ ಮಾಡಿದ್ದರು.
‘‘ಭಾರತೀಯ ಕ್ರಿಕೆಟ್ ತಂಡ ತನ್ನ ಕ್ಯಾಪನ್ನು ಧರಿಸುವ ಬದಲಿಗೆ ಮಿಲಿಟರಿ ಕ್ಯಾಪ್ ಧರಿಸಿದ್ದನ್ನು ಇಡೀ ವಿಶ್ವವೇ ನೋಡಿದೆ. ಐಸಿಸಿ ಇದನ್ನು ನೋಡಿಲ್ಲವೇ?ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಈ ವಿಚಾರವನ್ನು ಗಮನಕ್ಕೆ ತರುವ ಮೊದಲೇ ಇದರ ಬಗ್ಗೆ ಗಮನ ಹರಿಸುವುದು ಐಸಿಸಿಯ ಜವಾಬ್ದಾರಿಯಾಗಿದೆ’’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.





