ಇಂಗ್ಲೆಂಡ್‌ಗೆ 137 ರನ್‌ಗಳ ಭರ್ಜರಿ ಜಯ
ವಿಂಡೀಸ್ ವಿರುದ್ಧ ದ್ವಿತೀಯ ಟ್ವೆಂಟಿ-20 ಪಂದ್ಯ
► ಕೆರಿಬಿಯನ್ ಪಡೆ 45 ರನ್‌ಗೆ ಸರ್ವಪತನ
► ಅಂ.ರಾ.ಟಿ-20ಯಲ್ಲ್ಲಿ ಎರಡನೇ ಕನಿಷ್ಠ ಸ್ಕೋರ್
ಸೈಂಟ್ ಕಿಟ್ಸ್, ಮಾ.9: ಅಂತರ್‌ರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಎರಡನೇ ಅತ್ಯಂತ ಕನಿಷ್ಠ ಸ್ಕೋರ್(45) ದಾಖಲಿಸುವುದರೊಂದಿಗೆ ಇಂಗ್ಲೆಂಡ್ ತಂಡ ಶುಕ್ರವಾರ ರಾತ್ರಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ 137 ರನ್‌ಗಳ ಭರ್ಜರಿ ಜಯ ಸಾಧಿಸಿ ಮೆರೆದಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಇದು ಇಂಗ್ಲೆಂಡ್ ಟಿ-20ಯಲ್ಲಿ ಸಾಧಿಸಿದ ಗರಿಷ್ಠ ರನ್‌ಗಳ ಅಂತರದ ಜಯವಾಗಿದೆ.
2014ರಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ 39 ರನ್‌ಗೆ ಆಲೌಟ್ ಆಗಿರುವುದು ಅತ್ಯಂತ ಕನಿಷ್ಠ ಸ್ಕೋರ್ ಆಗಿ ದಾಖಲಾಗಿದೆ. ಟೆಸ್ಟ್ ಆಡುವ ರಾಷ್ಟ್ರವೊಂದರಿಂದ(ವಿಂಡೀಸ್) ಟಿ20ಯಲ್ಲಿ ದಾಖಲಾದ ಅತೀ ಕನಿಷ್ಠ ಸ್ಕೋರ್ ಇದಾಗಿದೆ.
ಇದಕ್ಕೂ ಮೊದಲು ಟೆಸ್ಟ್ ಆಡುವ ತಂಡಗಳಾದ ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ಟಿ20ಯಲ್ಲಿ ತಲಾ 60 ರನ್ ಗಳಿಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಒಂದು ಹಂತದಲ್ಲಿ 32 ರನ್‌ಗೆ 4 ವಿಕೆಟ್ ಕಳೆದುಕೊಂಡು ತೀರಾ ಸಂಕಷ್ಟದಲ್ಲಿತ್ತು. ಈ ವೇಳೆ ಆಸರೆಯಾದ ಜೋ ರೂಟ್(55) ಹಾಗೂ ಸ್ಯಾಮ್ ಬಿಲ್ಲಿಂಗ್ಸ್ (87, 47 ಎಸೆತ) ಪ್ರವಾಸಿ ತಂಡಕ್ಕೆ ಭಾರೀ ಬಲ ತುಂಬಿದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್‌ಗಳ ಉತ್ತಮ ಮೊತ್ತ ಕಲೆ ಹಾಕಿದರು. ಆ ಬಳಿಕ ಬ್ಯಾಟಿಂಗ್ ಮಾಡಿದ ಆತಿಥೇಯರುಕ್ರಿಸ್ ಜೋರ್ಡನ್ (6ಕ್ಕೆ 4) ಅವರ 2 ಓವರ್‌ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು. ಕೆರಿಬಿಯನ್ ಪಡೆಯ ಪರ ಕೇವಲ ಇಬ್ಬರು ದಾಂಡಿಗರು( ಹೆಟ್ಮೆಯರ್ 10 ಹಾಗೂ ಬ್ರಾತ್‌ವೇಟ್ 10) ಮಾತ್ರ ಎರಡಂಕೆಯ ಗಡಿ ದಾಟಿದರು. 11.5 ಓವರ್‌ಗಳಲ್ಲಿ ವಿಂಡೀಸ್ ತಂಡ ಸರ್ವಪತನ ಕಂಡಿತು.







