ಚುನಾವಣಾ ಪ್ರಚಾರದ ವೇಳೆ ಯೋಧರ ಫೋಟೋ ಬಳಸದಂತೆ ರಾಜಕೀಯ ಪಕ್ಷಗಳಿಗೆ ಆಯೋಗ ತಾಕೀತು

ಹೊಸದಿಲ್ಲಿ, ಮಾ.10: ಮುಂಬರುವ ಚುನಾವಣೆಯ ಪ್ರಚಾರದ ವೇಳೆ ಯೋಧರ ಫೋಟೋ ಅಥವಾ ಸೇನಾ ಕಾರಿಗಳ ಜತೆ ಭಾಗಿಯಾದ ಕಾರ್ಯಕ್ರಮಗಳಲ್ಲಿ ತೆಗೆಸಿಕೊಂಡ ಫೋಟೋ ಪ್ರದರ್ಶಿಸಕೂಡದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ತಾಕೀತು ಮಾಡಿದೆ.
2013ರಲ್ಲಿ ಹೊರಡಿಸಿದ್ದ ಆದೇಶವನ್ನು ಚುನಾವಣಾ ಆಯೋಗವು ಪುನರುಚ್ಛರಿಸಿದೆ.
ಲೋಕಸಭೆ ಮತ್ತು ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇನ್ನಷ್ಟೇ ಘೋಷಣೆಯಾಗಲಿದ್ದು, ಕೆಲವು ರಾಜಕೀಯ ಪಕ್ಷಗಳು ಯೋಧರ ಫೋಟೊವನ್ನು ತಮ್ಮ ಜಾಹೀರಾತಿನಲ್ಲಿ ಬಳಸಿರುವುದನ್ನು ಗಮನಿಸಿರುವ ಚುನಾವಣಾ ಆಯೋಗವು ಡಿ.4, 2013ರಲ್ಲಿ ಹೊರಡಿಸಿದ್ದ ಆದೇಶದ ನೆನಪು ಮಾಡಿದೆ.
ಇತ್ತೀಚೆಗೆ ದಿಲ್ಲಿಯಲ್ಲಿ ಹಾಕಲಾಗಿದ್ದ ಪೋಸ್ಟರ್ ಒಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜತೆಗೆ ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೋಟೋವನ್ನೂ ಬಳಸಿಕೊಳ್ಳಲಾಗಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ರವಿವಾರ ಎಲ್ಲ ರಾಜಕೀಯ ಪಕ್ಷಗಳಿಗೂ ಜಾಹೀರಾತು ಅಥವಾ ಚುನಾವಣೆ ಪ್ರಚಾರದಲ್ಲಿ ಯೋಧರ ಫೋಟೊ ಬಳಸಿಕೊಳ್ಳದಂತೆ ಆಯೋಗ ಆದೇಶ ನೀಡಿದೆ.





