ಕಾಶ್ಮೀರದ 2 ಪತ್ರಿಕೆಗಳಿಗೆ ಜಾಹೀರಾತು ಸ್ಥಗಿತಗೊಳಿಸಿದ ಸರಕಾರ: ಉಳಿದ ಪತ್ರಿಕೆಗಳು ಮಾಡಿದ್ದೇನು ಗೊತ್ತಾ?

ಶ್ರೀನಗರ, ಮಾ.10: ಶ್ರೀನಗರ ಮೂಲದ ಎರಡು ಪತ್ರಿಕೆಗಳಿಗೆ ಜಾಹೀರಾತನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಾಶ್ಮೀರದ ಎಲ್ಲ ಪ್ರಮುಖ ಪತ್ರಿಕೆಗಳು ರವಿವಾರ ಮುಖಪುಟವನ್ನು ಖಾಲಿ ಬಿಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ವ್ಯಕ್ತಪಡಿಸಿವೆ.
"ಗ್ರೇಟರ್ ಕಾಶ್ಮೀರ್’ ಮತ್ತು ‘ಕಾಶ್ಮೀರ್ ರೀಡರ್’ ಪತ್ರಿಕೆಗಳಿಗೆ ಸಕಾರಣವಿಲ್ಲದೇ ಜಾಹೀರಾತು ನಿರಾಕರಿಸಿರುವುದನ್ನು ಖಂಡಿಸಿ ಪ್ರತಿಭಟನೆ" ಎಂದು ಬರಹ ಪ್ರಕಟಿಸಿ ಮುಖಪುಟವನ್ನು ಖಾಲಿ ಬಿಡಲಾಗಿದೆ.

ಕಾಶ್ಮೀರ ‘ಎಡಿಟರ್ಸ್ ಗಿಲ್ಡ್’ನಲ್ಲಿ ಕೈಗೊಂಡ ನಿರ್ಣಯದ ಅನ್ವಯ ಮುಖಪುಟ ಖಾಲಿ ಬಿಡಲಾಗಿದೆ. ರವಿವಾರ ಸಂಜೆ ಕಾಶ್ಮೀರ ಎಡಿಟರ್ಸ್ ಗಿಲ್ಡ್ ವತಿಯಿಂದ ಪ್ರತಿಭಟನಾ ಜಾಥ ಹಮ್ಮಿಕೊಳ್ಳಲೂ ನಿರ್ಧರಿಸಲಾಗಿದೆ.
ಕಾಶ್ಮೀರ ಕಣಿವೆಯ ಅತಿಹೆಚ್ಚು ಪ್ರಸಾರದ ಗ್ರೇಟರ್ ಕಾಶ್ಮೀರ ಮತ್ತು ಕಾಶ್ಮೀರ್ ರೀಡರ್ ಪತ್ರಿಕೆಗಳಿಗೆ ಜಾಹೀರಾತನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಲಿಖಿತ ಆದೇಶ ಇಲ್ಲದಿದ್ದರೂ, ಜಮ್ಮು ಮತ್ತು ಕಾಶ್ಮೀರದ ಮಾಹಿತಿ ನಿರ್ದೇಶನಾಲಯ ಈ ಕುರಿತು ಪತ್ರಿಕೆಗೆ ಮೌಖಿಕವಾಗಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.





