ಬಂಟ್ವಾಳ: ಪಿಎಫ್ಐ ವತಿಯಿಂದ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ

ಬಂಟ್ವಾಳ, ಮಾ.10: ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಬಂಟ್ವಾಳ ತಾಲೂಕು ಮತ್ತು ಯೆನೆಪೋಯ ಅಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಪರ್ಲಿಯಾ ನರ್ಸಿಂಗ್ ಹೋಮ್ ಅಸ್ಪತ್ರೆ ಕೈಕಂಬದಲ್ಲಿ ರವಿವಾರ ನಡೆಯಿತು.
ಶಿಬಿರದಲ್ಲಿ ಮುಖ್ಯ ಭಾಷಣ ಮಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ರಕ್ತದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಟ ದಾನವಾಗಿದೆ. ಮನುಷ್ಯರ ನಡುವೆ ಮನುಷ್ಯತ್ವವನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕೊಡಗು ಪ್ರವಾಹದ ಕುರಿತಾದ ವರದಿಗೆ ಪ. ಗೋ. ಪ್ರಶಸ್ತಿಗೆ ಭಾಜನರಾದ ವಾರ್ತಾಭಾರತಿಯ ಉಪ ಸಂಪಾದಕ ಇಮ್ತಿಯಾಝ್ ಶಾ ತುಂಬೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಕೊಡಗು ನೆರೆ ಪರಿಹಾರದ ಕಾರ್ಯಾಚರಣೆಯಲ್ಲಿ ಪಾಪ್ಯುಲರ್ ಫ್ರಂಟ್ ಕೆಲಸ ಕಾರ್ಯಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ರಕ್ತದಾನ ಶಿಬಿರವು ತಾಲೂಕಿನಾದ್ಯಂತ ನಡೆಯಲಿದೆ. ಜನರ ಸಾಂದರ್ಭಿಕ ಅವಶ್ಯಕತೆಗಳನ್ನು ಪೂರೈಸವುದೇ ಸಂಘಟನೆಯ ಧ್ಯೇಯವಾಗಿದೆ ಎಂದರು. ಯೆನೆಪೋಯ ಆಸ್ಪತ್ರೆಯ ವೈದ್ಯರಾದ ಡಾ. ರಕ್ಷಿತಾ ಶಿಬಿರದ ಅಗತ್ಯ ಮಾಹಿತಿಗಳನ್ನು ನೀಡಿದರು. ಪಿ.ಎಫ್.ಐ ಬಿ.ಸಿರೋಡು ವಲಯ ಅಧ್ಯಕ್ಷ ಅಬ್ದುಲ್ ರಹಿಮಾನ್ ರಕ್ತ ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಬಂಟ್ವಾಳ ಪುರಸಭಾ ಸಮಿತಿ ಸದಸ್ಯರಾದ ಮೂನೀಶ್ ಅಲಿ, ಡಾ. ಹಿಪ್ಝುರ್ರಹ್ಮಾನ್, ಅರಫಾ ಜುಮಾ ಮಸ್ಜಿದ್ ಅಧ್ಯಕ್ಷ ಅಹ್ಮದ್ ಬಾವ, ಪರ್ಲಿಯಾ ನರ್ಸಿಂಗ್ ಹೋಮ್ ಹಿರಿಯ ವೈದ್ಯಾಧಿಕಾರಿ ಡಾ.ಸೊಮೇಶ್, ನುಸ್ರತ್ ಮಿಲಾದುನ್ನೆಬಿ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜಿ.ಕೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ದಾನಿಗಳಿಂದ 67 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಶಬೀರ್ ರಹ್ಮಾನ್ ಸ್ವಾಗತಿಸಿ, ರಹಿಮಾನ್ ಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










