ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ: ಎ.11ರಂದು ಮೊದಲ ಹಂತದ ಮತದಾನ, ಮೇ 23ರಂದು ಫಲಿತಾಂಶ

ಹೊಸದಿಲ್ಲಿ, ಮಾ.10: ಮುಂದಿನ ಲೋಕಸಭಾ ಚುನಾವಣೆಯ ಮತದಾನ ಎಪ್ರಿಲ್ –ಮೇ ತಿಂಗಳಲ್ಲಿ 7 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಯ ಮತದಾನ ಎ.11ರಂದು ನಿಗದಿಯಾಗಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಜ್ಞಾನ ಭವನದಲ್ಲಿ ಇಂದು ಸಂಜೆ ನಡೆದ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಆಯುಕ್ತ ಸುನೀಲ್ ಅರೋರಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು.
ಮೊದಲ ಹಂತದಲ್ಲಿ 20 ರಾಜ್ಯಗಳ 91 ಕ್ಷೇತ್ರಗಳಿಗೆ , ಎ.18ರಂದು ಎರಡನೇ ಹಂತದಲ್ಲಿ 13 ರಾಜ್ಯಗಳಲ್ಲಿ 97 ಕ್ಷೇತ್ರಗಳಲ್ಲಿ , ಎ.23ರಂದು ಮೂರನೇ ಹಂತಗಳ ಮತದಾನ ನಡೆಯಲಿದೆ . ಕರ್ನಾಟಕದಲ್ಲಿ ಎರಡು ಹಂತಗಳ ಮತದಾನ ನಡೆಯಲಿದ್ದು, ಮೊದಲ ಹಂತದಲ್ಲಿ ಎ.18ರಂದು 14 ಕ್ಷೇತ್ರಗಳಲ್ಲಿ ಮತ್ತು ಎರಡನೇ ಹಂತದಲ್ಲಿ ಎ.23ರಂದು ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮತದಾನ ವೇಳಾಪಟ್ಟಿ
ಎ.11 : ಮೊದಲ ಹಂತ-20 ರಾಜ್ಯಗಳ 91 ಕ್ಷೇತ್ರ
ಎ.18: ಎರಡನೇ ಹಂತ-13 ರಾಜ್ಯಗಳ 97 ಕ್ಷೇತ್ರ
ಎ.23: ಮೂರನೇ ಹಂತ-14 ರಾಜ್ಯಗಳ 115 ಕ್ಷೇತ್ರ
ಎ.29: ನಾಲ್ಕನೇ ಹಂತ-9 ರಾಜ್ಯಗಳ 71 ಕ್ಷೇತ್ರ
ಮೇ 06: ಐದನೇ ಹಂತ- 7 ರಾಜ್ಯಗಳ 51 ಕ್ಷೇತ್ರ
ಮೇ 12: ಆರನೇ ಹಂತ-7 ರಾಜ್ಯಗಳ 59 ಕ್ಷೇತ್ರ
ಮೇ 19: ಏಳನೇ ಹಂತ-8 ರಾಜ್ಯಗಳ 59 ಕ್ಷೇತ್ರ
ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟ
16ನೇ ಲೋಕಸಭಾ ಅವಧಿ ಜೂನ್ 3ಕ್ಕೆ ಮುಗಿಯಲಿದೆ. ಚುನಾವಣೆಗೆ ಸಂಬಂಧಿಸಿ ವಿವಿಧ ರಾಜ್ಯಗಳ ಆಯುಕ್ತರ ಜತೆ ಸರಣಿ ಸಭೆ ನಡೆಸಿ ಸಕಲ ಸಿದ್ಧತೆ ಮಾಡಲಾಗಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.ನೀತಿ ಸಂಹಿತೆ ಉಲ್ಲಂಘಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲ ಹಬ್ಬಗಳು, ಪರೀಕ್ಷೆಗಳನ್ನು ಪರಿಗಣಿಸಿ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಬಾರಿ 90 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 8.6 ಕೋಟಿ ಮತದಾರರ ಹೊಸ ಸೇರ್ಪಡೆಯಾಗಿದೆ. ಮತದಾನಕ್ಕೆ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಎಲ್ಲ ಇವಿಎಂಗಳಿಗೂ ವಿ ವಿ ಪ್ಯಾಟ್ ಗಳನ್ನು ಅಳವಡಿಸಲಾಗುವುದು, ಮತ ಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೊ ಇರಲಿದೆ ಎಂದು ಮಾಹಿತಿ ನೀಡಿದರು.
ಅಭ್ಯರ್ಥಿಗಳು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಮತದಾರರಿಗೆ ಮಾಹಿತಿ ನೀಡಬೇಕು ಎಂದರು.
ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕ ಬಳಸುವಂತಿಲ್ಲ. ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಿಆರ್ ಪಿಎಫ್ ಬಳಕೆ ಮಾಡಲಾಗುವುದು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್ ಪಿಎಫ್ ನ್ನು ನಿಯೋಜಿಸಲಾಗುವುದು ಎಂದು ಹೇಳಿದರು.
ಸರಿಯಾಗಿ ನಾಮಪತ್ರ ಭರ್ತಿ ಮಾಡದಿದ್ದರೆ ನಾಮಪತ್ರವನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಫಾರಂ 26ನ್ನು ಸರಿಯಾಗಿ ಭರ್ತಿ ಮಾಡಬೇಕು ಎಂದು ನುಡಿದರು.
ಮತಗಟ್ಟೆಗಳಲ್ಲಿ ಅಕ್ರಮ ನಡೆದಿರುವುದು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







