ನೀತಿಸಂಹಿತೆ ಜಾರಿ: ಸಿದ್ದರಾಮಯ್ಯರಿಗೆ ಖಾದರ್ ಡ್ರೈವರ್!

ಉಡುಪಿ, ಮಾ. 10: ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ದೇಶದಲ್ಲಿ ಚುನಾವಣೆ ನೀತಿ ಸಂಹಿತೆ ಇಂದು ಸಂಜೆಯಿಂದಲೇ ಜಾರಿಯಾದ ಹಿನ್ನೆಲೆಯಲ್ಲಿ ಉಡುಪಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ವಾಪಸ್ ತೆರಳುವಾಗ ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಚಲಾಯಿಸುತ್ತಿದ್ದ ಕಾರಿನಲ್ಲಿ ತೆರಳಿದರು.
ಕಲ್ಸಂಕದಲ್ಲಿ ಅಪರಾಹ್ನ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಮುಗಿಯುವ ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೀನುಗಾರ ಮಹಿಳೆಯರ ಕಾರ್ಯಕ್ರಮಕ್ಕೆ ಸರಕಾರಿ ಕಾರನ್ನು ಬಿಟ್ಟು ಸಚಿವ ಖಾದರ್ ಕಾರಿನಲ್ಲಿ ಆಗಮಿಸಿದರು.
ಶ್ಯಾಮಿಲಿ ಸಭಾಂಗಣದ ಕಾರ್ಯಕ್ರಮ ಮುಗಿಸಿದ ಸಿದ್ದರಾಮಯ್ಯ ಅಲ್ಲಿಂದ ಮಂಗಳೂರಿಗೂ ಖಾದರ್ ಅವರ ಕಾರಿನಲ್ಲೇ ಹೊರಟರು. ಈ ಕಾರಿಗೆ ಖಾದರ್ ಅವರೇ ಚಾಲಕರಾಗಿದ್ದದ್ದು ಎಲ್ಲರ ಗಮನ ಸೆಳೆದರು.
ಈ ಕಾರಿನಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಕೂಡ ಇದ್ದರು. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಯಮಾಲ ಕೂಡ ಖಾಸಗಿ ಕಾರಿನಲ್ಲಿ ತೆರಳಿದರು.












