ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

ಬೆಂಗಳೂರು, ಮಾ.10: ನಗರದ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಮಕ್ಕಳಿಗೆ ಪಲ್ಸ್‌ಪೋಲಿಯೋ ಲಸಿಕೆಯ ಹನಿಯನ್ನು ಹಾಕುವ ಮೂಲಕ ರಾಜ್ಯಾದ್ಯಂತ ನಡೆಯುತ್ತಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ದೇಶದಾದ್ಯಂತ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದ್ದು, ರಾಜ್ಯದಲ್ಲಿ ಸರಕಾರ ಹಾಗೂ ಹಲವು ಸಂಘ-ಸಂಸ್ಥೆಗಳಿಂದ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ರೋಗ ಬರದಂತೆ ತಡೆಯಬೇಕು ಎಂದು ಹೇಳಿದರು.
ನೆರೆಯ ಆಪ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಪೋಲಿಯೋ ರೋಗ ಕಂಡು ಬಂದಿದೆ. ನಮ್ಮ ದೇಶವು ಪೋಲಿಯೋ ಮುಕ್ತ ರಾಷ್ಟ್ರ ಎಂದು ಗುರುತಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ 64 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುತ್ತಿದೆ ಎಂದು ತಿಳಿಸಿದರು.
ನಾಳೆಯಿಂದಲೂ ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ರವಿವಾರ 32,571 ಬೂತ್‌ಗಳನ್ನು ತೆರೆಯಲಾಗಿದ್ದು, 51,918 ತಂಡಗಳು ಹಾಗೂ 1,10,351 ಕಾರ್ಯಕರ್ತರು ಅಭಿಯಾನದ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ನುಡಿದರು.
7,827 ಮೇಲ್ವಿಚಾರಕರು ಹಾಗೂ 2,481 ಸಂಚಾರಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ವಿಶ್ವಬ್ಯಾಂಕ್, ರೋಟರಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಯೋಜನೆಯ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘ -ಸಂಸ್ಥೆಗಳು ಪಾಲ್ಗೊಂಡಿವೆ ಎಂದು ಅವರು ಹೇಳಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ.ಟಿ.ಎಸ್.ಪ್ರಭಾಕರ್, ಉಪನಿರ್ದೇಶಕರಾದ ಡಾ.ಬಿ.ಎಂ.ರಜನಿ ಮತ್ತಿತರರು ಉಪಸ್ಥಿತರಿದ್ದರು.







