ಉಗ್ರರನ್ನು ಹತ್ಯೆಗೈಯುವುದು ವಾಯುಪಡೆಯ ಕೆಲಸವಾಗಿತ್ತೇ ಹೊರತು ಶವಗಳನ್ನು ವಾಪಸ್ ತರುವುದಲ್ಲ: ಸುಷ್ಮಾ

ಹೊಸದಿಲ್ಲಿ, ಮಾ.3: ಕಳೆದ ತಿಂಗಳು ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನಲ್ಲಿ ನಡೆಸಿದ ಸರ್ಜಿಕಲ್ ದಾಳಿಯ ಬಗ್ಗೆ ಪ್ರಶ್ನಿಸಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘‘ಭಯೋತ್ಪಾದಕರನ್ನು ಕೊಲ್ಲುವುದೇ ಭಾರತೀಯ ವಾಯುಪಡೆಯ ಕೆಲಸವಾಗಿತ್ತೇ, ವಿನಾ, ಪಾಕಿಸ್ತಾನದಲ್ಲಿ ಮೃತದೇಹಗಳನ್ನು ಸಂಗ್ರಹಿಸುವುದಾಗಿರಲಿಲ್ಲ’’ ಎಂದು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ‘‘ ಗಡಿಯಾಚೆಗೆ ತೆರಳಿ, ಭಯೋತ್ಪಾದಕರನ್ನು ಹತ್ಯೆಗೈಯುವುದೇ ಭಾರತೀಯ ವಾಯುಪಡೆಯ ಉದ್ದೇಶವಾಗಿತ್ತೇ ಹೊರತು ಅವರ ಮೃತದೇಹಗಳನ್ನು ತರುವುದಾಗಿರಲಿಲ್ಲ. ಗಡಿಯಾಚೆಗೆ ದಾಳಿ ಮಾಡಿ, ವಾಪಾಸಾಗುವುದೇ ಅವರ ಕೆಲಸವಾಗಿತ್ತು ಎಂದರು.
ಬಾಲಕೋಟ್‌ನಲ್ಲಿ ಉಗ್ರಗಾಮಿಗಳ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆಯ ವಿವರಗಳನ್ನು ನೀಡುವಂತೆ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಸುಷ್ಮಾ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಮಾಜಿ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಅವರು, ಸಶಸ್ತ್ರ ಪಡೆಗಳನ್ನು ರಾಜಕೀಕರಣಗೊಳಿಸದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಆಗ್ರಹಿಸಿದ್ದರು.







