ಮೈತ್ರಿ ನೆಪದಲ್ಲಿ ಮೊಮ್ಮಕ್ಕಳನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ: ಮಾಜಿ ಸಚಿವ ಎ.ಮಂಜು

ಮೈಸೂರು,ಮಾ.10: ಮೈತ್ರಿ ನೆಪದಲ್ಲಿ ಮೊಮ್ಮಕ್ಕಳನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ, ದೇವೇಗೌಡರ ನಿಲುವನ್ನು ರಾಜ್ಯದ ಜನ ವಿರೋಧಿಸುತ್ತಿದ್ದಾರೆ. ಹಾಗಾಗಿ ಮೊಮ್ಮಕ್ಕಳನ್ನು ಕಣದಿಂದ ಹಿಂದೆ ಸರಿಸಬೇಕು ಎಂದು ಮಾಜಿ ಸಚಿವ ಎ.ಮಂಜು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಮನವಿ ಮಾಡಿದರು.
ಮೈಸೂರಿನ ಜುಯಲಕ್ಷ್ಮಿಪುರಂನಲ್ಲಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರ ಮನೆಗೆ ರವಿವಾರ ಭೇಟಿ ನೀಡಿದ ಅವರು, ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಣಕ್ಕಿಳಿದರೆ ಜಿಲ್ಲೆಯ ರಾಜಕೀಯ ಚಿತ್ರಣವೇ ಬೇರೆಯಾಗಲಿದೆ. ಆತ ಸ್ಪರ್ಧಿಸುವುದು ನನಗೆ ಇಷ್ಟವಿಲ್ಲ. ಮೈತ್ರಿ ನೆಪದಲ್ಲಿ ಮೊಮ್ಮಕ್ಕಳನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ. ದೇವೇಗೌಡರ ನಿಲುವನ್ನು ರಾಜ್ಯದ ಜನ ವಿರೋಧಿಸುತ್ತಿದ್ದಾರೆ. ಹಾಗಾಗಿ ಮೊಮ್ಮಕ್ಕಳನ್ನು ಕಣದಿಂದ ಹಿಂದೆ ಸರಿಸಬೇಕು ಎಂದು ಹೇಳಿದರು.
ಹಾಸನದಿಂದ ದೇವೇಗೌಡರು ಸ್ಪರ್ಧಿಸಲಿ. ಇಲ್ಲವಾದಲ್ಲಿ ಹಾಸನ ರಾಜಕೀಯದ ಚಿತ್ರಣವೇ ಬೇರೆಯಾಗಲಿದೆ. ದೇವೇಗೌಡರ ನಾಯಕತ್ವವನ್ನು ನಾವು ಕೂಡ ಮೆಚ್ಚುತ್ತೇವೆ. ನಿಮಗೆ ಗೌರವವಿದ್ದರೆ ಮಂಡ್ಯದಿಂದ ನಿಖಿಲ್, ಹಾಸನದಿಂದ ಪ್ರಜ್ವಲ್ ರನ್ನು ಕಣದಿಂದ ದೂರ ಸರಿಸಿ. ಆಗ ನಿಮ್ಮ ಗೌರವ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.
ನಿಮ್ಮ ಸುಪುತ್ರ ಅಂಬರೀಶ್ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ, ಅಂಬರೀಶ್ ರಿಂದ ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗೆ ಹೆಚ್ಚು ಲಾಭವಾಗಿದೆ. ಅದನ್ನು ನೀವು ಅರಿತು ಕೊಂಡು ಸುಮಲತಾರನ್ನ ಬೆಂಬಲಿಸಬೇಕು. ಅದನ್ನು ಬಿಟ್ಟು ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಂಸ್ಕೃತಿಯೇ ಗೊತ್ತಿಲ್ಲ ಹಾಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಜರಿದರು.







