ಶೇ.33ರ ಮಹಿಳಾ ಮೀಸಲಾತಿಗೂ ಮಹಿಳಾ ಸಂಗ್ರಾಮ ನಡೆಸಬೇಕು: ಮಾಜಿ ಸಚಿವೆ ಲಲಿತಾ ನಾಯಕ್

ಮಂಡ್ಯ, ಮಾ.10: ಅಯ್ಯಪ್ಪ ದೇಗುಲ ಪ್ರವೇಶಕ್ಕಾಗಿ ನಡೆಸಿದ ಸಂಘಟನಾತ್ಮಕ ಹೋರಾಟದ ಮಾದರಿಯಲ್ಲೇ ಶೇ.33ರ ಮಹಿಳಾ ಮೀಸಲಾತಿಗೂ ರಾಷ್ಟ್ರೀಯ ಮಟ್ಟದ ಮಹಿಳಾ ಸಂಗ್ರಾಮ ನಡೆಸುವ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವೆ ಬಿ.ಟಿ ಲಲಿತಾನಾಯಕ್ ಪ್ರತಿಪಾದಿಸಿದ್ದಾರೆ.
ಜಿಲ್ಲಾ ಕಲಾವಿದರ ಟ್ರಸ್ಟ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗಾಂಧಿ ಭವನದಲ್ಲಿ ರವಿವಾರ ನಡೆದ ಮಹಿಳಾ ಹಬ್ಬ, ಸಾಧಕಿಯರಿಗೆ ಜನಪರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಹಣಬಲ ಹಾಗೂ ಅಕ್ರಮದ ಮೇಲೆಯೇ ಇಂದಿನ ಚುನಾವಣೆಗಳು ನಡೆಯುತ್ತಿರುವುದರಿಂದ ಸಮರ್ಥ ಮಹಿಳೆಯರು ಚುನಾವಣೆ ಮೂಲಕ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜಕೀಯ ಅಸಮಾನತೆ ಸೃಷ್ಟಿಯಾಗಿದೆ. ಈ ಕಾರಣಕ್ಕಾಗಿಯೇ ಮಹಿಳೆಯರಿಗೆ ಸಂವಿಧಾನಾತ್ಮಕವಾದ ಮೀಸಲಾತಿ ದೊರೆಯಬೇಕಿದೆ ಎಂದರು.
ದೇಶದಲ್ಲಿ ಸಂವಿಧಾನ ಬರುವ ಮುನ್ನ ಮಹಿಳೆ ಮನು ಸಂಸ್ಕೃತಿಯಲ್ಲಿ ಬಹಳ ಹಿಂಸೆಯನ್ನು ಅನುಭವಿಸಿದ್ದಾಳೆ. ಈ ದೇಶವನ್ನು ಕಟ್ಟುವುದು ಹೇಗೆ ಎಂಬ ಚಿಂತನೆ ನಮ್ಮಲ್ಲಿ ಬಂದಾಗ ಮಾತ್ರ ಮಹಿಳೆ ಪ್ರಬಲಳಾಗುವುದಕ್ಕೆ ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.
ನ್ಯೂಯಾರ್ಕ್‍ನಲ್ಲಿ ಜವಳಿ ಕಾರ್ಖಾನೆಯಲ್ಲಿ ದುಡಿಮೆ ಮಾಡುತ್ತಿದ್ದ ಮಹಿಳೆಯರು ಕಾರ್ಖಾನೆಯ ಕಿರುಕುಳ, ಹಿಂಸೆಯ ವಿರುದ್ಧ 19ನೇ ಶತಮಾನದಲ್ಲೇ ಹೋರಾಟ ಪ್ರಾರಂಭಿಸಿದರು. ಸಮಾನ ವೇತನ, ಕಡಿಮೆ ಅವಧಿ, ಇತರೆ ಬೇಡಿಕೆಗಳನ್ನು ಮುಂದಿಟ್ಟು ಜಯ ಗಳಿಸಿದ್ದರಿಂದ ಮಾ.8ರಂದು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸುವ ಪದ್ಧತಿ ಬಂತು ಎಂದು ಅವರು ವಿವರಿಸಿದರು.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರು ಪ್ರತಿನಿಧಿಸುತ್ತಿಲ್ಲ. ಇದು ಅವರ ರಾಜಕೀಯ ಹಿನ್ನಡೆಯನ್ನು ಬಿಂಬಿಸುತ್ತದೆ. ಮಹಿಳೆಯರು ರಾಜಕೀಯ ಮೀಸಲಾತಿಗಾಗಿ ದೇಶಾದ್ಯಂತ ಗಂಭೀರ ಹೋರಾಟ ನಡೆಸಬೇಕು. ಅದಕ್ಕೆ ನಮ್ಮ ಬೆಂಬಲವಿದೆ ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಹೇಮಲತಾ ಬಸವರಾಜು, ನಗರಸಭಾ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕ್ರೈಸ್ತ್ ಕಿಂಗ್ ಸಂಸ್ಧೆ ಕಾರ್ಯದರ್ಶಿ ವಿಜಯವಾಣಿ ಜೋಸೆಫ್, ಬೆಂಗಳೂರಿನ ಡಾ. ಜಯಮಾಲಾ, ಎಇಟಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ನಂದಿನಿ, ಪ್ರಗತಿಪರ ರೈತ ಮಹಿಳೆ ಎ.ಟಿ. ಶೈಲಜಾ ಅವರಿಗೆ ಜನಪರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತ್ ಪಾದಯಾತ್ರಿ ಟಿ. ವೀರಣ್ಣ, ಉದ್ಯಮಿ ಎಂ. ಮಹೇಂದ್ರ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಜಿಲ್ಲಾ ಕಲಾವಿದರ ಟ್ರಸ್ಟ್ ಅಧ್ಯಕ್ಷ ಎನ್. ಜೈಕುಮಾರ್, ಜ್ಞಾನಸಿಂಧು ವೃದ್ಧಾಶ್ರಮದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕುಂಬಾರ ಜಾಗೃತ ವೇದಿಕೆ ಅಧ್ಯಕ್ಷ ಎಂ. ಕೃಷ್ಣ, ಮಾನವ ಹಕ್ಕುಗಳ ಸಮಿತಿಯ ಪೌಲ್ ಪೀಟರ್‍ಸನ್, ಬಂಜಾರ ವೆಂಕಟೇಶ್, ರಾಧಿಕಾ, ವಿಷ್ಣವರ್ಧನ್ ಸಂಘದ ಅಧ್ಯಕ್ಷ ವಿಷ್ಣುವಿಠಲ್, ಮುಖಂಡರಾದ ಸಿ.ಸಿದ್ದಶೆಟ್ಟಿ, ರಾಜೇಂದ್ರ ಇತರರಿದ್ದರು.







