ಇಥಿಯೋಪಿಯಾ ವಿಮಾನ ಪತನ: ಒಬ್ಬ ಪ್ರಯಾಣಿಕನ ಪ್ರಾಣ ಉಳಿಸಿದ 2 ನಿಮಿಷಗಳು!

ಏಥೆನ್ಸ್, ಮಾ.11: ತಾನು ವಿಮಾನ ನಿಲ್ದಾಣಕ್ಕೆ ಎರಡು ನಿಮಿಷ ತಡವಾಗಿ ಆಗಮಿಸದೇ ಇರುತ್ತಿದ್ದರೆ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್ ಏರ್ ಲೈನ್ಸ್ ಬೋಯಿಂಗ್ ವಿಮಾನ ಪತನದಲ್ಲಿ ಸಾವಿಗೀಡಾದ 150ನೇ ಪ್ರಯಾಣಿಕನಾಗುತ್ತಿದ್ದೆ ಎಂದು ಗ್ರೀಸ್ ದೇಶದ ನಾಗರಿಕರೊಬ್ಬರು ಹೇಳಿದ್ದಾರೆ.
‘ಮೈ ಲಕ್ಕಿ ಡೇ’ ಎಂಬ ಶೀರ್ಷಿಕೆ ನೀಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅಂಟೋನಿಸ್ ಮವ್ರೋಪೌಲೋಸ್ ಎಂಬ ಈ ವ್ಯಕ್ತಿ ``ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ ಅನ್ನು ಸಮಯಕ್ಕೆ ಸರಿಯಾಗಿ ತಲುಪಲು ಯಾರೂ ನನಗೆ ಸಹಾಯ ಮಾಡದೇ ಇರುವದಕ್ಕೆ ನನಗೆ ಹುಚ್ಚು ಹಿಡಿದಂತಾಗಿತ್ತು'' ಎಂದು ಬರೆದಿದ್ದಾರೆ.
ಇಂಟರನ್ಯಾಷನಲ್ ಸಾಲಿಡ್ ವೇಸ್ಟ್ ಅಸೋಸಿಯೇಶನ್ ಎಂಬ ಸಂಘಟನೆಯ ಅಧ್ಯಕ್ಷರಾಗಿರುವ ಇವರು ನೈರೋಬಿಯಲ್ಲಿ ನಡೆಯಲಿದ್ದ ವಿಶ್ವ ಸಂಸ್ಥೆಯ ‘ಎನ್ವಿರಾನ್ಮೆಂಟ್ ಪ್ರೋಗ್ರಾಂ’ಗೆ ತೆರಳಲಿದ್ದರು. ಪತನಕ್ಕೀಡಾದ ವಿಮಾನದಲ್ಲಿ ಅವರು ಪ್ರಯಾಣಿಸುವವರಿದ್ದರೂ ಡಿಪಾರ್ಚರ್ ಗೇಟ್ ಮುಚ್ಚಿ ಎರಡು ನಿಮಿಷಗಳಾಗುವಷ್ಟರಲ್ಲಿ ಅವರು ಅಲ್ಲಿಗೆ ಬಂದಿದ್ದರು. ಅವರಿಗೆ ಸಿಬ್ಬಂದಿ ಒಳ ಪ್ರವೇಶಿಸಲು ಅನುಮತಿಸಲಿಲ್ಲ. ಗುರುತು ತಪಾಸಣೆ ಮಾಡದ ಹೊರತು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ ಕಾರಣ ಅವರು ನಂತರ ಟಿಕೆಟ್ ಕಾಯ್ದಿರಿಸಿದ್ದರು.
``ಒಳ ಪ್ರವೇಶಿಸಲು ಅನುಮತಿಸಿಲ್ಲದೇ ಇರುವುದಕ್ಕೆ ಪ್ರತಿಭಟಿಸಿ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೂ ನಾನು ತೆರಳಿದ್ದೆ. ಆಗ ಅಲ್ಲಿನ ಅಧಿಕಾರಿ ಪ್ರತಿಭಟಿಸಬೇಡಿ, ಬದಲಾಗಿ ದೇವರಿಗೆ ಪ್ರಾರ್ಥಿಸಿ. ದುರಂತಕ್ಕೀಡಾದ ಆ ವಿಮಾನವನ್ನು ಏರದ ಒಬ್ಬನೇ ಒಬ್ಬ ಪ್ರಯಾಣಿಕ ನೀವು ಎಂದಿದ್ದರು'' ಎಂದು ಮಾವ್ರೊಪೌಲೋಸ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ರವಿವಾರ ವಿಮಾನ ನಿಲ್ದಾಣದಿಂದ ಹೊರಟ ಆರು ನಿಮಿಷಗಳಲ್ಲಿಯೇ ಬೋಯಿಂಗ್ 737 ವಿಮಾನ ಪತನಗೊಂಡು ಅದರಲ್ಲಿದ್ದ ಎಲ್ಲಾ ಪ್ರಯಾಣಿಕರೂ ಮೃತಪಟ್ಟಿದ್ದರು.







