ಡಿಸೆಂಬರ್ 13-15: ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ಮಾ.11: ಕಳೆದ ವರ್ಷದಂತೆ ಈ ಬಾರಿಯೂ ಡಿಸೆಂಬರ್ ತಿಂಗಳಿನಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಸಮ್ಮೇಳನವು ಡಿಸೆಂಬರ್ 13ರಿಂದ 15ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಸಾಮಾಜಿಕ ನ್ಯಾಯ, ಸಮಾನತೆ, ದುರ್ಬಲವರ್ಗದವರ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣ ಕುರಿತಂತೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಚಿಂತಕರು, ಪ್ರಸಿದ್ಧ ವ್ಯಕ್ತಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಸಾಮಾನ್ಯರು ಹಾಗೂ ಅಧಿಕಾರಿಗಳು ವಿಚಾರ ಮಂಡಿಸುವರು.
ಕಳೆದ ವರ್ಷ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಮ್ಮೇಳನವನ್ನು ಆಯೋಜಿಸಿತ್ತು. ವಿಶ್ವಮಟ್ಟದ ಅನೇಕ ಪರಿಣತರು ಈ ಸಮ್ಮೇಳನದಲ್ಲಿ ಪಾಲ್ಗೊಂಡು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದ್ದರು.
ಜಾಗತಿಕ ಮಟ್ಟದಲ್ಲಿ ಈ ಸಮ್ಮೇಳನ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಈ ವರ್ಷವೂ ಸಮ್ಮೇಳನವನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧದ ಸರ್ಕಾರಿ ಆದೇಶ ಹೊರ ಬಿದ್ದಿದೆ.
ಸಾಮಾಜಿಕ ಸಮಾನತೆಯ ಹಾದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ತತ್ವಗಳು ಇಂದು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಬಾಬಾ ಸಾಹೇಬರು ತಮ್ಮ ಸಂದೇಶ, ಬರಹ, ಆಚರಣೆಗಳ ಮೂಲಕ ಜಗತ್ತಿಗೆ ನೀಡಿರುವ ಕೊಡುಗೆಯನ್ನು ಅವಲೋಕಿಸುವಲ್ಲಿ ಉದ್ದೇಶಿತ ಸಮ್ಮೇಳನ ಸಹಕಾರಿಯಾಗಲಿದೆ.
ಸಂವಿಧಾನವನ್ನು ದೇಶಕ್ಕೆ ನೀಡಿದ ಮಾನವತವಾದಿ, ಅರ್ಥಶಾಸ್ತ್ರಜ್ಞ, ಕಾನೂನು ಪಂಡಿತರಾದ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ವಿಶ್ಲೇಷಿಸಲಿದೆ.







