ಸಿಐಡಿ ಹೆಸರಲ್ಲಿ ಖ್ಯಾತ ಲೇಖಕ ರಾಮ್ ಪುನಿಯಾನಿಗೆ ಬೆದರಿಕೆ
ಖಂಡನೆ, ತನಿಖೆಗೆ ಆಗ್ರಹ

ಮುಂಬೈ, ಮಾ.11: ಖ್ಯಾತ ಲೇಖಕ, ಮಾನವ ಹಕ್ಕು ಹೋರಾಟಗಾರ ಪ್ರೊ. ರಾಮ್ ಪುನಿಯಾನಿ ಅವರನ್ನು ಬೆದರಿಸುವ ಘಟನೆಯೊಂದು ಇತ್ತೀಚಿಗೆ ನಡೆದಿದೆ ಎಂದು ತಿಳಿದು ಬಂದಿದೆ. ಸಂಘ ಪರಿವಾರ ಮತ್ತು ಅದರ ರಾಜಕೀಯ ಸಿದ್ಧಾಂತಗಳನ್ನು ಕಟುವಾಗಿ ಟೀಕಿಸುವ ರಾಮ್ ಪುನಿಯಾನಿ ಅವರನ್ನು ಮೌನವಾಗಿಸುವ ಷಡ್ಯಂತ್ರ ಈ ಘಟನೆಯ ಹಿಂದಿದೆ ಎಂದು ಮಾನವ ಹಕ್ಕು ಹೋರಾಟಗಾರರು ಹಾಗು ಸಂಘಟನೆಗಳು ದೂರಿವೆ.
ಈ ಬಗ್ಗೆ ‘ವಾರ್ತಾ ಭಾರತಿ’ ಜೊತೆ ಮಾತನಾಡಿದ ರಾಮ್ ಪುನಿಯಾನಿ ಅವರು, “ಮಾರ್ಚ್ 9ರಂದು ಮುಂಬೈಯಲ್ಲಿರುವ ನಮ್ಮ ಮನೆಗೆ ಬಂದ ಮೂರು ಜನರ ತಂಡವೊಂದು ಮಹಾರಾಷ್ಟ್ರ ಸಿಐಡಿಯಿಂದ ಬಂದಿರುವುದಾಗಿ ಹೇಳಿಕೊಂಡಿದೆ. ಪಾಸ್ ಪೋರ್ಟ್ ಗೆ ಸಲ್ಲಿಸಿರುವ ಅರ್ಜಿ ಕುರಿತು ವಿಚಾರಣೆಗೆ ಬಂದಿರುವುದಾಗಿ ಆ ತಂಡ ಹೇಳಿದೆ. ಆದರೆ ನಾನು ಹಾಗು ಅವರ ಮನೆಯ ಯಾವುದೇ ಸದಸ್ಯರು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿಯೇ ಇಲ್ಲ. ಈ ತಂಡ ವಿಚಾರಣೆಯ ನೆಪದಲ್ಲಿ ನಮ್ಮಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದೆ. ಮನೆಯ ಸುತ್ತಮುತ್ತ ಏನೇನಿದೆ ?, ನನ್ನ ಕುಟುಂಬ ಸದಸ್ಯರು ಎಲ್ಲೆಲ್ಲಿ ಇದ್ದಾರೆ ?, ಏನು ಮಾಡುತ್ತಿದ್ದಾರೆ ?, ನಾನು ಏಕೆ ಐಐಟಿ ಕೆಲಸ ಬಿಟ್ಟೆ ?, ಇತ್ಯಾದಿ ಸಂಬಂಧವೇ ಇಲ್ಲದ ಪ್ರಶ್ನೆಗಳನ್ನು ಕೇಳಿದೆ. ಅವರು ಸಿಐಡಿಯಿಂದಲೇ ಬಂದಿದ್ದಾರಾ ಎಂದು ನನಗೆ ಖಚಿತವಿಲ್ಲ. ಆದರೆ ಅವರ ಮಾತಿನಲ್ಲಿ ಅವರು ಪೋಲೀಸರ ಹಾಗೆ ಕಾಣುತ್ತಿದ್ದರು. ಈ ಬಗ್ಗೆ ಪೊಲೀಸ್ ದೂರು ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ " ಎಂದು ಹೇಳಿದರು.
ಮಾನವ ಹಕ್ಕು ಸಂಘಟನೆಗಳು ಹಾಗು ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ. ಇದು ಕೋಮು ಶಕ್ತಿಗಳ ವಿರುದ್ಧದ ಹಾಗು ಸೌಹಾರ್ದದ ಧ್ವನಿಯಾದ ಪುನಿಯಾನಿ ಅವರನ್ನು ಮೌನವಾಗಿಸುವ ಹುನ್ನಾರ ಎಂದು ಅವು ಆರೋಪಿಸಿವೆ. ಪುನಿಯಾನಿ ಅವರನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸುವ ಕುತಂತ್ರವೂ ಇದರ ಹಿಂದಿರಬಹುದು ಎಂದು ಅವು ದೂರಿವೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಹಾಗು ಈ ರೀತಿ ಒಬ್ಬ ಖ್ಯಾತ ಲೇಖಕರನ್ನು ಬೆದರಿಸುವ ಹಿಂದಿರುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಮುಂಬೈ ಪೊಲೀಸ್ ಕಮಿಷನರ್ ಗೆ ಮನವಿ ಸಲ್ಲಿಸಿದ್ದಾರೆ.
ರಾಮ್ ಪುನಿಯಾನಿ ಅವರು ಮುಂಬೈ ಐಐಟಿಯಲ್ಲಿ ಬಯೋಮೆಡಿಕಲ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕರಾಗಿದ್ದರು. 2004ರಲ್ಲಿ ಆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅವರು ಪೂರ್ಣಕಾಲಿಕ ಲೇಖಕ ಹಾಗು ಸಾಮಾಜಿಕ ಕಾರ್ಯಕರ್ತರಾಗಿ ಕೋಮು ಸೌಹಾರ್ದಕ್ಕಾಗಿ ದುಡಿಯುತ್ತಿದ್ದಾರೆ. ಸೌಹಾರ್ದ, ಜಾತ್ಯತೀತತೆ ಕುರಿತು ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಪುನಿಯಾನಿ ಅವರು ಪ್ರತಿಷ್ಠಿತ ‘ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ’ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಶಬ್ನಮ್ ಹಶ್ಮಿ ಹಾಗು ಲೇಖಕ ಸುಭಾಷ್ ಘಟಾಡೆ ಅವರು ಜನರಿಂದ ಸಹಿ ಸಂಗ್ರಹಿಸಿ ಮುಂಬೈ ಪೊಲೀಸ್ ಕಮಿಶನರ್ ಗೆ ಸಲ್ಲಿಸಲಿದ್ದಾರೆ. ಪುನಿಯಾನಿ ಅವರನ್ನು ಬೆಂಬಲಿಸಿ ಸಹಿ ಹಾಕುವವರು ಈ ಇಮೇಲ್ ಗೆ shabnamhashmi@gmail.com ಮಾರ್ಚ್ 13ರೊಳಗೆ ಬರೆಯಬಹುದು.







