‘ದೇಶವಿಭಜಕ, ಭ್ರಷ್ಟಾಚಾರಿ, ಕ್ರಿಮಿನಲ್ ಅಭ್ಯರ್ಥಿಗಳನ್ನು ಸೋಲಿಸಿ’
ದೇಶದಾದ್ಯಂತ ಮತದಾನದ ಕುರಿತು ಜನಜಾಗೃತಿ ಕಾರ್ಯಕ್ರಮ
ಉಡುಪಿ, ಮಾ.11: ಈ ಬಾರಿಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಸ್ ಇಂಡಿಯಾ ಮಾಹಿತಿ ಸೇವಾ ಸಮಿತಿ ವತಿಯಿಂದ ಮತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಜಿ.ಎ.ಕೋಟೆಯಾರ್ ಮಾತನಾಡಿ, ಮತದಾನ ಎಂಬುದು ಒಂದು ಅಮೂಲ್ಯ ವಾದ ಹಕ್ಕು. ಅದನ್ನು ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ಮಾರಿಕೊಳ್ಳ ಬಾರದು. ಮತವನ್ನು ಖರೀದಿಸುವ ಪದ್ಧತಿಯನ್ನು ಸಮಾಜದಿಂದ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಮತದಾರರು ಮತದಾನ ಮಾಡುವಾಗ ಚುನಾವಣೆಗೆ ಸ್ಪರ್ಧಿ ಸುವ ಅಭ್ಯರ್ಥಿಯ ವಿದ್ಯಾರ್ಹತೆ ಹಾಗೂ ಪ್ರಾಮಾಣಿಕತೆಯನ್ನು ತಿಳಿದು ಕೊಳ್ಳಬೇಕು. ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಸಮಾಜ ಸೇವಕರಿಗೆ ಆದ್ಯತೆ ನೀಡಬೇಕು. ಹಣ, ಹೆಸರು, ಪ್ರತಿಷ್ಠೆಗಾಗಿ ಚುನಾವಣೆಗೆ ಸ್ಪರ್ಧಿಸುವವರನ್ನು ತಿರಸ್ಕರಿಸಬೇಕು. ದೇಶದ ಉನ್ನತಿ, ಅಭಿವೃದ್ಧಿ ಹಾಗೂ ಸಮಾಜದ ಹಿತದೃಷ್ಟಿ ಯಿಂದ ಮತ ಚಲಾಯಿಸಬೇಕು. ಅಭ್ಯರ್ಥಿಯ ಜಾತಿ, ಧರ್ಮ ಮುಖ್ಯವಾಗ ಬಾರದು.
ತನ್ನ ಆದಾಯ ವೃದ್ಧಿಸಿಕೊಳ್ಳಲು ಮತ್ತು ಕುಟುಂಬದ ಅಭಿವೃದ್ಧಿಗಾಗಿ ಯಾರು ಕೂಡ ಚುನಾವಣೆ ಸ್ಪರ್ಧಿಸಬಾರದು. ಅಭ್ಯರ್ಥಿಯು ಕ್ರಿಮಿನಲ್, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುದನ್ನು ಮತದಾರರು ಖಾತ್ರಿ ಪಡಿಸಿಕೊಳ್ಳಬೇಕು. ದೇಶ ವಿಭಜನೆ ಮಾಡುವ ಮನೋಸ್ಥಿತಿ ಹೊಂದಿರುವವ ರಿಗೆ, ಅಪರಾಧ ಹಿನ್ನೆಲೆ ಇರುವವರಿಗೆ ಹಾಗೂ ಭ್ರಷ್ಟಾಚಾರಿಗಳಿಗೆ ಮತ ಹಾಕಬಾರದು. ಬಡವರು, ಶೋಷಿತರ ಪರ ಕಾಳಜಿ ಇಲ್ಲದ ವ್ಯಕ್ತಿಗಳಿಗೆ ಮತ ನೀಡಬಾರದು ಎಂದು ಅವರು ಮನವಿ ಮಾಡಿದರು.
ಈ ಯಾವುದೇ ಗುಣಗಳು ಚುನಾವಣಾ ಸ್ಪರ್ಧಿಸುವ ಅಭ್ಯರ್ಥಿಯಲ್ಲಿ ಇಲ್ಲದಿದ್ದರೆ ಮತದಾರರು ನೋಟಾ ಮತ ಹಾಕಬೇಕು. ಆ ಮೂಲಕ ಕ್ರಿಮಿ ನಲ್, ಭ್ರಷ್ಟಾಚಾರಿಗಳನ್ನು ಸೋಲಿಸಬೇಕು. ಆದುದರಿಂದ ಈ ಬಾರಿ ಮತ ದಾರರು ದೇಶದ ಉನ್ನತಿ, ಅಭಿವೃದ್ಧಿ ಹಾಗೂ ಸಮಾಜದ ಹಿತದೃಷ್ಠಿಯಿಂದ ಮತ ಚಲಾಯಿಸಬೇಕು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಸ್ ಇಂಡಿಯಾ ಯುವ ಘಟಕದ ಅಧ್ಯಕ್ಷ ವಿಶ್ವನಾಥ್, ಮಾಸ್ ಇಂಡಿಯಾ ಸದಸ್ಯ ನರಸಿಂಹಮೂರ್ತಿ ರಾವ್, ಪದಾಧಿಕಾರಿಗಳಾದ ಹರಿಕೃಷ್ಣ ತಂತ್ರಿ, ಐರಿನ್ ತಾವ್ರೊ, ಸುಜಾತ ಪೂಜಾರಿ ಉಪಸ್ಥಿತರಿದ್ದರು.







