ಮಹಿಳೆಯರ ಬ್ಯಾಂಕ್ ಸ್ಥಾಪನೆಯಿಂದ ಸಬಲೀಕರಣ ಸಾಧ್ಯ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ, ಮಾ.11: ಮಹಿಳೆಯರು ಕೇವಲ ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡರೆ ಸಾಲದು. ಬದಲಾಗಿ ಅವರದ್ದೇ ಆದ ಸ್ವಂತ ಬ್ಯಾಂಕೊಂದನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಬೇಕು. ಇದುವೇ ನಿಜವಾದ ಮಹಿಳಾ ಸಬಲೀಕರಣ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸಂಪದ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಉಡುಪಿಯ ಮಥುರಾ ಸಭಾಂಗಣದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಮಹಿಳೆ ಸಮಾಜದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಹಿಂದಿನ ಮಹಿಳೆಯ ಪರಿಸ್ಥಿತಿ ಅವಲೋಕಿಸಿದರೆ ಇಂದು ಹಲವಾರು ಬದಲಾವಣೆ ಕಂಡಿದೆ. ಮಹಿಳೆಯರ ಸ್ಥಿತಿಯಲ್ಲಿ ಕೂಡ ಸುಧಾರಣೆಯಾಗಿದೆ. ಮಹಿಳೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾಳೆ. ಇದಕ್ಕೆಲ್ಲಾ ಪ್ರಮುಖ ಕಾರಣ ಮಹಿಳೆಯರು ಒಗ್ಗಟ್ಟಾಗಿ ಸ್ವ-ಸಹಾಯ ಸಂಘಗಳ ಮೂಲಕ ಸಂಘಟಿತರಾಗಿರುವುದು ಎಂದರು
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ಸರಕಾರ ಇಲಾಖೆಯ ಮೂಲಕ ಮಹಿಳೆ ಯರ ಸಶಕ್ತಿಕರಣಕ್ಕೆ ಹಲವಾರು ಯೋಜನೆಗಳನ್ನು ಪರಿಚಯಿಸಿದ್ದು, ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು ತಮ್ಮ ಜೀವನ ರೂಪಿಸಲು ಪ್ರಯತ್ನಿಸ ಬೇಕು ಎಂದರು.
ಅನುಪಮಾ ಮಾಸಿಕ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ. ಮಾತನಾಡಿ, ಇಂದಿಗೂ ಸಮಾಜದಲ್ಲಿ ಹಲವಾರು ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಮಹಿಳೆಗೆ ಸಮಾಜದಲ್ಲಿ ಗೌರವದ ಬದುಕು ಕಲ್ಪಿಸದೆ ಆಚರಿಸುವ ಮಹಿಳಾ ದಿನಾಚರಣೆಗೆ ಯಾವುದೇ ಆರ್ಥವಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ ಕ್ರಾಸ್ ಸಂಸ್ಥೆಯ ಭಗಿನಿ ಝೀಟಾ ಡಿಸೋಜ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ಸಂಪದ ಸಂಸ್ಥೆಯ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಸ್ತ್ರೀ ಸಂಘಟನೆಯ ನಿರ್ದೇಶಕಿ ಸಿಸ್ಟರ್ ಜಾನೆಟ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಜಾನೆಟ್ ಬಾರ್ಬೋಜಾ ಸ್ವಾಗತಿಸಿದರು. ಸಂಪದ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ ವಂದಿಸಿದರು. ವಿನಯ ಡಿಕೋಸ್ತಾ ಮತ್ತು ಸ್ಟ್ಯಾನ್ಲಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.








