ಎರಡು ಎಲೆ ಚಿಹ್ನೆ ವಿವಾದ: ಮಾ. 15ರಂದು ಟಿಟಿವಿ ದಿನಕರನ್ ಮನವಿ ವಿಚಾರಣೆ

ಚೆನ್ನೈ, ಮಾ. 11: ಎಐಎಡಿಎಂಕೆಗೆ ಎರಡು ಎಲೆಗಳ ಚಿಹ್ನೆ ಮಂಜೂರು ಮಾಡಿರುವುದನ್ನು ವಿರೋಧಿಸಿ ಟಿಟಿವಿ ದಿನಕರನ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15ರಂದು ವಿಚಾರಣೆ ನಡೆಸಲಿದೆ. ದಿನಕರನ್ ಅವರು ಕೋರಿಕೆಯಂತೆ ಮನವಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣಕ್ಕೆ ಎರಡು ಎಲೆಗಳ ಚಿಹ್ನೆ ನೀಡಿರುವ ಭಾರತೀಯ ಚುನಾವಣಾ ಆಯೋಗದ ನಿರ್ಧಾರ ಎತ್ತಿಹಿಡಿದು ದಿಲ್ಲಿ ಉಚ್ಚ ನ್ಯಾಯಾಲಯ ಫೆಬ್ರವರಿ 28ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಟಿಟಿವಿ ದಿನಕರನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತಮಿಳುನಾಡಿನ ಮೂಲೆ ಮೂಲೆಯಲ್ಲೂ ಪ್ರಸಿದ್ಧಿ ಗಳಿಸಿದ್ದ ಪ್ರತಿಷ್ಠಿತ ಎರಡು ಎಲೆಯ ಚಿಹ್ನೆಯ ಕುರಿತಂತೆ ದಿನಕರನ್ ಅವರ ಅಮ್ಮಾ ಮಕ್ಕಳ್ ಕಚ್ಚಿ (ಎಎಂಎಂಕೆ) ಹಾಗೂ ಇ.ಕೆ. ಪಳನಿಸ್ವಾಮಿ, ಒ. ಪನ್ನೀರ್‌ಸೆಲ್ವಂ ಅವರ ಬಣದ ನಡುವೆ ಘರ್ಷಣೆ ನಡೆದಿತ್ತು.
Next Story





