‘737 ಮ್ಯಾಕ್ಸ್ 8’ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟ ಇಥಿಯೋಪಿಯ ಏರ್‌ಲೈನ್ಸ್

ಅಡಿಸ್ ಅಬಾಬ (ಇಥಿಯೋಪಿಯ), ಮಾ. 11: ಮುಂದಿನ ಸೂಚನೆಯವರೆಗೆ ತನ್ನಲ್ಲಿರುವ ಬೋಯಿಂಗ್ ಕಂಪೆನಿಯ ಎಲ್ಲ ‘737 ಮ್ಯಾಕ್ಸ್ 8’ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಡಲಾಗಿದೆ ಎಂದು ಇಥಿಯೋಪಿಯದ ವಿಮಾನಯಾನ ಸಂಸ್ಥೆ ‘ಇಥಿಯೋಪಿಯನ್ ಏರ್‌ಲೈನ್ಸ್’ ಸೋಮವಾರ ಹೇಳಿದೆ.
ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದಿಂದ ಕೆನ್ಯ ರಾಜಧಾನಿ ನೈರೋಬಿಗೆ ಹಾರುತ್ತಿದ್ದ ಹಾರುತ್ತಿದ್ದ ಈ ಮಾದರಿಯ ವಿಮಾನವು ಪತನಗೊಂಡ ಒಂದು ದಿನದ ಬಳಿಕ ಅದು ತನ್ನ ಈ ನಿರ್ಧಾರವನ್ನು ಪ್ರಕಟಿಸಿದೆ.
ರವಿವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟಿದ್ದಾರೆ.
‘‘ಅಪಘಾತಕ್ಕೆ ಕಾರಣ ಏನು ಎನ್ನುವುದು ಗೊತ್ತಾಗಿಲ್ಲವಾದರೂ, ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ದಿಷ್ಟ ಮಾದರಿಯ ವಿಮಾನವನ್ನು ಸೇವೆಯಿಂದ ಹೊರಗಿಡುವ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗಿದೆ’’ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಏರ್‌ಲೈನ್ ಹೇಳಿದೆ.
ರವಿವಾರ ಪತನಗೊಂಡ ವಿಮಾನವನ್ನು ಹೊರತುಪಡಿಸಿ, ಇಥಿಯೋಪಿಯನ್ ಏರ್‌ಲೈನ್ಸ್‌ನಲ್ಲಿ ಈಗ ನಾಲ್ಕು ‘737 ಮ್ಯಾಕ್ಸ್ 8’ ವಿಮಾನಗಳಿವೆ.
5 ತಿಂಗಳ ಅವಧಿಯಲ್ಲಿ ಬೋಯಿಂಗ್ ಕಂಪೆನಿಯ ಈ ಮಾದರಿಯ 2 ವಿಮಾನಗಳು ಪತನಗೊಂಡಿರುವುದನ್ನು ಸ್ಮರಿಸಬಹುದಾಗಿದೆ.







