ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಿ: ದಾವಣಗೆರೆ ಜಿಲ್ಲಾಧಿಕಾರಿ ಶಿವಮೂರ್ತಿ ಸೂಚನೆ
ಜಿಲ್ಲೆಯಲ್ಲಿ ಒಟ್ಟು 14,93,822 ಮತದಾರರು

ದಾವಣಗೆರೆ, ಮಾ.11: ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಮಾ.10ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಮೇ.27ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ವೇಳಾಪಟ್ಟಿ ಮತ್ತು ಚುನಾವಣಾ ಸಿದ್ಧತೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ಜಿಲ್ಲಾಡಳಿತ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೇಳಾಪಟ್ಟಿ: ಮಾ.28 ಚುನಾವಣಾ ಅಧಿಸೂಚನೆ ಹೊರಡಿಸುವ ಮತ್ತು ನಾಮಪತ್ರಗಳನ್ನು ಸಲ್ಲಿಸುವ ಆರಂಭದ ದಿನವಾಗಿರುತ್ತದೆ. ಎ.4 ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನ. ಎ.5 ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದು, ಎ.8 ಉಮೇದುವಾರಿಕೆಯನ್ನು ಹಿಂದೆಗೆದುಕೊಳ್ಳಲು ಕಡೆಯ ದಿನವಾಗಿರುತ್ತದೆ. ಎ.23 ಮತದಾನದ ದಿನಾಂಕವಾಗಿರುತ್ತದೆ. ಮೇ.23ರ ಬೆಳಗ್ಗೆ 8ರಿಂದ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು ಮೇ.27ರಂದು ಚುನಾವಣೆ ಮುಕ್ತಾಯದ ದಿನವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಾದರಿ ನೀತಿ ಸಂಹಿತೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾ.10 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮಾದರಿ ನೀತಿ ಸಂಹಿತೆಯು ಜಿಲ್ಲಾದ್ಯಂತ ಜಾರಿಯಲ್ಲಿದ್ದು, ಈ ಸಂಹಿತೆಯನ್ನು ಪಾಲಿಸಲು ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕೋರಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಯಾವುದೇ ರೀತಿಯಲ್ಲಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸುವ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರಕಾರಿ ವಾಹನಗಳನ್ನು ಅಧಿಗ್ರಹಿಸಲಾಗಿದೆ ಮತ್ತು ಜಿಲ್ಲೆಯಲ್ಲಿನ ಸರಕಾರಿ/ಅರೆ ಸರಕಾರಿ/ನಿಗಮ ಹಾಗೂ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರವಾಸಿ ಮಂದಿರ/ಅತಿಥಿ ಗೃಹಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳು ಯಾವುದೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲು ಅವಕಾಶವಿರುವುದಿಲ್ಲ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯ ನಿರ್ವಹಿಸಲು ನೇಮಕಗೊಂಡಿರುವ ಅಧಿಕಾರಿ/ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ರಜೆಯ ಮೇಲೆ ತೆರಳುವಂತಿಲ್ಲ. ಅಲ್ಲದೆ ಕೇಂದ್ರಸ್ಥಾನ ಬಿಡಬೇಕಾದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಯ ಅನುಮತಿ ಪಡೆಯಬೇಕೆಂದು ತಿಳಿಸಿದರು.
ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳ ವೆಚ್ಚಮಿತಿಯನ್ನು ಗರಿಷ್ಠ 70 ಲಕ್ಷ ರೂ.ಗೆ ನಿಗದಿಪಡಿಸಿದೆ. ಕಾಂಪೋಡಿಯಂ ಆಫ್ ಇನ್‌ಸ್ಟ್ರಕ್ಷನ್ಸ್ ಆನ್ ಇಲೆಕ್ಷನ್ ಎಕ್ಸ್‌ಪೆಂಡಿಚರ್ ಮಾನಿಟರಿಂಗ್(ಅಕ್ಟೋಬರ್ 2017 ಡಾಕ್ಯುಮೆಂಟ್ 6- ಎಡಿಷನ್ 3) ಪ್ರಕಾರ ಅಭ್ಯರ್ಥಿಗಳು ಅವರ ಚುನಾವಣಾ ವೆಚ್ಚಗಳ ವಿವರಗಳನ್ನು ನೋಡಿಕೊಳ್ಳಲು ಹೆಚ್ಚುವರಿಯಾಗಿ ವೆಚ್ಚ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮತದಾನ ದಿನ:
ಮತದಾನ ದಿನ ಹಾಗೂ ಮತದಾನದ ದಿನದ ಹಿಂದಿನ 48 ಗಂಟೆಗಳ ಪೂರ್ವದಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗುವುದು. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯ ಹೊರಗೆ ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ತೆರೆಯುವ ಅನಧಿಕೃತ ಗುರುತಿನ ಚೀಟಿ ನೀಡುವ ಸ್ಥಳದಲ್ಲಿ ಹೆಚ್ಚಿನ ಜನರು ಗುಂಪು ಸೇರಲು ಅವಕಾಶ ಕಲ್ಪಿಸಬಾರದಾರದು ಹಾಗೂ ಆ ಸ್ಥಳದಲ್ಲಿ ಪೋಸ್ಟರ್, ಬಾವುಟ, ಚಿಹ್ನೆ ಅಥವಾ ಇತರ ಪ್ರಚಾರ ಸಾಮಗ್ರಿಗಳನ್ನು ಪ್ರದರ್ಶಿಸತಕ್ಕದ್ದಲ್ಲ ಹಾಗೂ ಹೊಂದಿರತಕ್ಕದ್ದಲ್ಲ. ಅಲ್ಲದೆ ಆ ಸ್ಥಳದಲ್ಲಿ ಯಾವುದೇ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲು ಅವಕಾಶವಿರುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲಾ ಮತದಾರರಿಗೆ ಭಾವಚಿತ್ರವಿರುವ ವೋಟರ್ ಸ್ಲಿಪ್‌ಗಳನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಚುನಾವಣಾ ವೆಚ್ಚ ಉಸ್ತುವಾರಿ: ಅಭ್ಯರ್ಥಿಗಳ ಚುನಾವಣಾ ವೆಚ್ಚ ಉಸ್ತುವಾರಿ ಬಗ್ಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಕ್ಸ್‌ಪೆಂಡಿಚರ್ ಮಾನಿಟರಿಂಗ್ ಸೆಲ್‌ಗೆ ಟಿ.ಆಂಜನೇಯ, ಮುಖ್ಯ ಲೆಕ್ಕಾಧಿಕಾರಿ, ಜಿಪಂ (ಮೊ.ಸಂ. 9448533794) ಇವರನ್ನು ನೇಮಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್‌ರಚನೆ: ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷವೊಡ್ಡುವುದನ್ನು ಹಾಗೂ ಅನಧಿಕೃತ ಮದ್ಯ ಮಾರಾಟ ಹಣ ಹಂಚಿಕೆ ತಡೆಯುವ ಸಲುವಾಗಿ ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 25 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಈ ತಂಡವು 24*7 ಕಾರ್ಯ ನಿರ್ವಹಿಸಲಿದೆ.
ಸೇರ್ಪಡೆ ಮತ್ತು ತೆಗದುಹಾಕಲಾದ ಮತದಾರರ ವಿವರ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 2018ರ ಅ.10ರಿಂದ 2019ರ ಮಾ.10 ರವರೆಗೆ ಒಟ್ಟು 35,094 ಮತದಾರರು ಸೇರ್ಪಡೆಯಾಗಿದ್ದಾರೆ ಹಾಗೂ 29532 ಮತದಾರರನ್ನು ತೆಗದುಹಾಕಲಾಗಿದೆ.
ಮತದಾನ ಸಿಬ್ಬಂದಿ ವಿವರ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಸುಮಾರು 9,784 ಮತದಾನ ಸಿಬ್ಬಂದಿಯನ್ನುನೇಮಕ ಮಾಡಿ ಮತದಾನದ ದಿನದಂದು ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಎಚ್.ಬಸವರಾಜೇಂದ್ರ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಉಪಸ್ಥಿತರಿದ್ದರು.
ಚುನಾವಣಾ ಪ್ರಚಾರ ವಾಹನ ಪರವಾನಿಗೆ ಕಡ್ಡಾಯ
ಚುನಾವಣೆ ಪ್ರಚಾರಕ್ಕಾಗಿ ಬಳಸಲಿರುವ ಎಲ್ಲಾ ವಾಹನಗಳಿಗೆ ಅಭ್ಯರ್ಥಿಯು ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದು ಬಳಸಬೇಕು. ಪರವಾನಿಗೆ ಪಡೆಯದೇ ವಾಹನವನ್ನು ಪ್ರಚಾರಕ್ಕೆ ಬಳಸಿದಲ್ಲಿ ಅಂತಹ ವಾಹನಗಳನ್ನು ಭಾರತೀಯ ದಂಡ ಸಂಹಿತೆ ಕಲಂ 171 ಎಚ್.ರಂತೆ ಚುನಾವಣಾ ಪ್ರಚಾರದಿಂದ ಹೊರಗಿಡಲಾಗುವುದು. ಪರವಾನಿಗೆ ಪಡೆಯುವ ಉದ್ದೇಶಕ್ಕಾಗಿ ‘ಸಿಂಗಲ್ ವಿಂಡೋ ಸಿಸ್ಟಂ’ ಪರಿಚಯಿಸಲಾಗಿದ್ದು ದಾವಣಗೆರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಜಿ.ನಜ್ಮಾ (ಮೊ.ಸಂ. 9480712365) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 1896, ಗಂಡು ಮತದಾರರು 7,58,904 ಹೆಣ್ಣು ಮತದಾರರು 7,34,918 ಒಟ್ಟು 14,93,822 ಮತದಾರರಿದ್ದಾರೆ.
ದಾವಣಗೆರೆ ಜಿಲ್ಲಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು 24 ಗಂಟೆಯೊಳಗೆ ತೆರವುಗೊಳಿಸಲು ತಂಡಗಳನ್ನು ರಚಿಸಿ ಈಗಾಗಲೇ ತರಬೇತಿಯನ್ನು ನೀಡಲಾಗಿದೆ ಹಾಗೂ ತೆರವು ಕಾರ್ಯ ಆರಂಭಿಸಲಾಗಿದೆ.
-ಜಿ.ಎನ್.ಶಿವಮೂರ್ತಿ, ಜಿಲ್ಲಾಧಿಕಾರಿ







