ಶೇ.10 ಮೀಸಲಾತಿಗೆ ತಡೆ ಸಾಧ್ಯವಿಲ್ಲ: ಸುಪ್ರೀಂಕೋರ್ಟ್

ಹೊಸದಿಲ್ಲಿ, ಮಾ.11: ಮೇಲ್ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಸರಕಾರದ ಘೋಷಣೆಗೆ ತಡೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮಾರ್ಚ್ 28ರಂದು ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಸಾಮಾನ್ಯ ವರ್ಗ(ಜನರಲ್ ಕ್ಯಾಟಗರಿ)ದ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10 ಮೀಸಲಾತಿ ನೀಡುವುದಾಗಿ ಕೇಂದ್ರ ಸರಕಾರ ಜನವರಿಯಲ್ಲಿ ಘೋಷಿಸಿತ್ತು. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದ ಪ್ರಧಾನಮಂತ್ರಿ ಮೋದಿ, ಅವಕಾಶದ ಸಮಾನತೆಯನ್ನು ಸರಕಾರ ಬಯಸುತ್ತಿದೆ ಎಂದಿದ್ದರು. ಆದರೆ , ಸರಕಾರದ ನಿರ್ಧಾರವನ್ನು ಟೀಕಿಸಿದ್ದ ಕಾಂಗ್ರೆಸ್, ಇದು ಚುನಾವಣಾ ಗಿಮಿಕ್ ಎಂದು ಟೀಕಿಸಿತ್ತು. ಶೇ.10 ಮೀಸಲಾತಿ ನೀಡಿದರೆ , ಇದು ಸುಪ್ರೀಂಕೋರ್ಟ್ ನಿಗದಿಗೊಳಿಸಿರುವ ಶೇ.50ರ ಮಿತಿಯನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಪೀಠ ತಡೆ ನೀಡಲು ನಿರಾಕರಿಸಿತು ಮತ್ತು ಅರ್ಜಿಯಲ್ಲಿ ಎತ್ತಿರುವ ಅಂಶಗಳ ಕುರಿತು ಟಿಪ್ಪಣಿಯನ್ನು ಅರ್ಜಿಯೊಂದಿಗೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು.





