ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬೆಂಬಲವಿಲ್ಲ: ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮರೇಗುದ್ದಿ
ಬೆಳಗಾವಿ, ಮಾ.11: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಇಲ್ಲವೇ ತಿರಸ್ಕರಿಸಿ ಎಂಬ ಹೇಳಿಕೆ ಮುಂದಾಲೋಚನೆ ಇಲ್ಲದ ಅಪ್ರಬುದ್ದ ಹೇಳಿಕೆಯಾಗಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತವೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪರಶುರಾಮ ಮರೇಗುದ್ದಿ ಹೇಳಿದ್ದಾರೆ.
ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 46 ಲಕ್ಷಕ್ಕಿಂತ ಹೆಚ್ಚು ಅಸ್ಪಶ್ಯ ಜನಸಂಖ್ಯೆಯಾದ ಮಾದಿಗ ಸಮುದಾಯ ಸುಮಾರು 25 ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿ ಸರಕಾರವೇ ನೇಮಕ ಮಾಡಿದ ನ್ಯಾ.ಸದಾಶಿವ ಆಯೋಗವು 2012ರಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿದ್ದು, ಒಟ್ಟು 15 ಮೀಸಲಾತಿಗಳಲ್ಲಿ 6 ಮಾದಿಗರಿಗೆ, 5 ಹೊಲೆಯರಿಗೆ, 3 ಭೋವಿ, ಲಂಬಾಣಿ, ಕೋರಮ ಕೊರಚಗೆ, 1 ಅಲೆಮಾರಿಗಳಿಗೆ ಈ ಮೀಸಲಾತಿಯನ್ನು ಹಂಚಿಕೆ ಮಾಡಿ ವರದಿಯನ್ನು ಅಂದಿನ ಬಿಜೆಪಿ ಮುಖ್ಯಮಂತ್ರಿ ಸದಾನಂದಗೌಡರಿಗೆ ಮನವಿ ಸಲ್ಲಿಸಿತ್ತು ಎಂದು ಅವರು ಹೇಳಿದರು.
ಆದರೆ ಇದು ಅವೈಜ್ಞಾನಿಕವಾಗಿದೆ ಎಂದು ಸುಳ್ಳು ಸುದ್ದಿ ಹೊರಡಿಸಲಾಯಿತು. ಜಾತಿಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದರು ಕೂಡ ಇದರ ವಿರುದ್ಧ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಕೆಲವು ಜಾತಿಗಳು ಅಡ್ಡಿಪಡಿಸುತ್ತ ಬಂದಿವೆ. ಇದರ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ಕಳೆದ 20 ವರ್ಷಗಳಿಂದ ಆಡಳಿತ ನಡೆಸಿದ ಮೂರು ಪಕ್ಷಗಳು ಒಳ ಮೀಸಲಾತಿ ಜಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತದೆ ಎಂದು ಪರುಶುರಾಮ ಮರೇಗುದ್ದಿ ತಿಳಿಸಿದರು.
ನಂತರ ಮಾತನಾಡಿದ ರಾಜ್ಯ ಗೌರವಾಧ್ಯಕ್ಷ ಎಸ್.ಮಾರಪ್ಪ,ರಾಜ್ಯ ಹಾಗೂ ಕೇಂದ್ರ ಎರಡು ಸರಕಾರಗಳು ನಮಗೆ ಅನ್ಯಾಯ ಮಾಡಿದೆ. ಆದುದರಿಂದ, ಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲಿಸುವುದಿಲ್ಲ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಮೋಸ ಮಾಡಿದ ಪಕ್ಷ ಹಾಗೂ ಪಕ್ಷದ ನಾಯಕರನ್ನು ಈ ಚುನಾವಣೆಯಲ್ಲಿ ಸೋಲಿಸುವ ಪಣ ತೊಟ್ಟಿದ್ದೇವೆ ಎಂದರು.
ದೇವನಹಳ್ಳಿ, ಬೀದರ್ ಜಿಲ್ಲೆಯ ಔರಾದ್, ಬಳ್ಳಾರಿ ಸೇರಿದಂತೆ ಇನ್ನುಳಿದ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ವಿಧಾನಸಭಾ ಟಿಕೆಟ್ ನೀಡಿಲ್ಲ. ಇನ್ನೂ ಕೆಲವು ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ಕೊಟ್ಟು ಉದ್ದೇಶಪೂರ್ವಕವಾಗಿ ಅವರನ್ನು ಸೋಲಿಸಿದ್ದಾರೆ. ಇದಕ್ಕೆ ಪ್ರತಿ ಉತ್ತರ ಬರುವ ಲೋಕಸಭಾ ಚುನಾವಣೆಯಲ್ಲಿ ನೀಡುತ್ತೇವೆ ಎಂದು ಅವರು ಹೇಳಿದರು.
ಹೈದರಾಬಾದ್‌ನಲ್ಲಿ ಮಂದ ಕೃಷ್ಣ ಮಾದಿಗರು ಸುಮಾರು 10 ಲಕ್ಷ ಜನ ಸೇರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಳ ಮೀಸಲಾತಿ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ಮೂರು ಪಕ್ಷಗಳು ನಮಗೆ ಅನ್ಯಾಯ ಮಾಡುತ್ತಾ ಬಂದಿವೆ. ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟದಲ್ಲಿ ಬೆಂಬಲವನ್ನು ನೀಡಿದ ಡಾ.ಸಿ.ಎಸ್.ದ್ವಾರಕಾನಾಥ್, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಇವರಿಗೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲವಿದೆ ಎಂದು ಮಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮುರಗೇಶ್ ಕಂಬಣ್ಣವರ್, ರಾಜ್ಯ ಕಾರ್ಯದರ್ಶಿ ಭಾಗ್ಯಾ ಬಿ.ಟಿ, ಜಿಲ್ಲಾಧ್ಯಕ್ಷ ಯಲ್ಲಪ್ಪಾಕಗಧಾಳ, ಜಿಲ್ಲಾ ಉಪಾಧ್ಯಕ್ಷ ಗಂಗಾಧರ ನಾವಲಗಟ್ಟಿ, ಬಾಬು ಪೂಜಾರಿ, ಯಲ್ಲಪ್ಪಾ ಹುದಲಿ, ಲಕ್ಷ್ಮಣ ಮೇತ್ರಿ, ಬಸವರಾಜ ಮುಗಳಿಹಾಳ, ರುದ್ರಪ್ಪ ಮಾದರ ಸೇರಿದಂತೆ ಇತರರು ಉಪಸ್ಥಿತರಿದ್ದರು.







